ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಸುಲಿಗೆ : ನಾಗರಿಕರ ಆಕ್ರೋಶ

ಬೆಂಗಳೂರು, ಏ. ೨೭- ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಸರ್ಕಲ್‌ನಲ್ಲಿರುವ ಪೀಪಲ್ ಟ್ರೀ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯತನದಿಂದಾಗಿ ಕೋವಿಡ್ ಸೋಂಕಿತ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಜಿ ಕೆ ವೆಂಕಟೇಶ್ ನೇತೃತ್ವದಲ್ಲಿ ನೂರಾರು ನಾಗರಿಕರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.
ಪೀಪಲ್ ಟ್ರೀ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಬಾಲಕಿ ಸಾವನ್ನಪ್ಪಿದ್ದಾಳೆ. ಆಕೆಗೆ ಕೇವಲ ೧೦ ಕೆಜಿ ಆಮ್ಲಜನಕ ನೀಡಲಾಗಿದೆ. ಅದರಿಂದ ಆಕೆ ಸಾವನ್ನಪ್ಪಿದ್ದಾಳೆ. ಈಗ ೬ ಲಕ್ಷದ ೯೦ ಸಾವಿರ ರೂ ಬಿಲ್ ಮಾಡಿದ್ದಾರೆ. ಒಬ್ಬೊಬ್ಬ ಕೊರೊನಾ ಪೇಷೆಂಟ್‌ಗಳಿಂದ ೭ ರಿಂದ ೮ ಲಕ್ಷ ಸುಲಿಗೆ ಮಾಡುತ್ತಿದ್ದಾರೆ. ಈ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯಿತು.
ಪೀಪಲ್ ಟ್ರೀ ಆಸ್ಪತ್ರೆ ಧನದಾಹಿ ಆಸ್ಪತ್ರೆ ಆಗಿದ್ದು ಬಡ ಕೊರೊನಾ ರೋಗಿಗಳಿಗೆ ಅಡ್ಮಿಷನ್ ಕೊಡುತ್ತಿಲ್ಲ. ಸರ್ಕಾರ ಆದೇಶದಂತೆ ಶೇ ೫೦ ರಷ್ಟು ಬೆಡ್‌ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕಿತ್ತು. ಆದರೆ ಪೀಪಲ್ ಟ್ರೀ ಆಸ್ಪತ್ರೆ ಅದನ್ನು ಗಾಳಿಗೆ ತೂರಿದೆ ಎಂದು ಯಶವಂತಪುರ ವಾರ್ಡ್-೩೭ರ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಜಿ.ಕೆ.ವೆಂಕಟೇಶ್(ಎನ್.ಟಿ.ಆರ್) ರವರು ಆಸ್ಪತ್ರೆ ವಿರುದ್ದ ಕಿಡಿಕಾರಿದರು.
ಶ್ರೀಮಂತರಿಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದಾರೆ.ಸ್ಥಳೀಯ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮುನಿರತ್ನ ರವರು ಕೂಡಲೆ ಗಮನಹರಿಸಿ ಆಸ್ಪತ್ರೆ ಲೈಸನ್ಸ್ ರದ್ದು ಮಾಡಿಸಬೇಕು ಎಂದು ಜಿ.ಕೆ.ವೆಂಕಟೇಶ್ ಒತ್ತಾಯ ಪಡಿಸಿದರು.
ನಾಗರಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲಗಂಟೆಗಳ ಕಾಲ ಆಸ್ಪತ್ರೆ ಮುಂದೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಭಾಯಿಸಿದರು.