ಪೀಣ್ಯ ಮೇಲ್ಸೆತುವೆ ಸಂಚಾರ ವಿಳಂಬ

ಬೆಂಗಳೂರು,ಜು.೨೩- ನಗರವನ್ನು ಹಲವು ಜಿಲ್ಲೆಗಳೊಂದಿಗೆ ಬೆಸೆಯುವ ಪೀಣ್ಯ ಫ್ಲೈ ಓವರ್ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ)ನಲ್ಲಿ ಕೇಬಲ್ ಅಳವಡಿಕೆ ಕಾರ್ಯ ಆರಂಭವಾಗಿದ್ದು,ಭಾರೀ ವಾಹನಗಳ ಸಂಚಾರ ಇನ್ನೂ ೬ ತಿಂಗಳು ವಿಳಂಬವಾಗಲಿದೆ.
ಕಾಮಗಾರಿ ಡಿಸೆಂಬರ್ ಕೊನೆಯವರೆಗೆ ಮುಂದುವರೆಯಲಿದ್ದು ಆನಂತರ ಪರೀಕ್ಷಾರ್ಥ ಸಂಚಾರ ನಡೆಸಿ ಬಳಿಕವೇ ಬಸ್, ಟ್ರಕ್ ಇನ್ನಿತರ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಿದ್ದು ಇದರಿಂದ ಮುಂದಿನ ವರ್ಷದ ಜನವರಿಯಲ್ಲಿ ಭಾರೀ ವಾಹನಗಳ ಸಂಚಾರವು ಆರಂಭಗೊಳ್ಳಲಿದೆ.
ಫ್ಲೈ ಓವರ್ ಸದೃಢತೆ ಹಾಗೂ ವಾಹನ ಸಂಚಾರ ಕುರಿತು ತೀರ್ಮಾನ ಕೈಗೊಳ್ಳಲು ನೇಮಿಸಿರುವ ಪರಿಣಿತರ ಸಮಿತಿ ಸದಸ್ಯರು ಪಾಲ್ಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.
ಬೆಂಗಳೂರು-ತುಮಕೂರು ಫ್ಲೈಓವರ್ ಭಾರೀ ಗಾತ್ರದ ವಾಹನಗಳಿಗೆ ಮುಂದಿನ ವರ್ಷವೇ ಮುಕ್ತವಾಗಲಿದೆ. ಕೇಬಲ್ ಅಳವಡಿಕೆ ಕಾರ್ಯ ಆರಂಭ ಆಗಿದ್ದು,ಪೂರ್ಣ ಗೊಳ್ಳಲು ಇನ್ನೂ ಐದಾರು ತಿಂಗಳು ಬೇಕಾಗಬಹುದು.
ಬೆಂಗಳೂರು- ತುಮಕೂರು ಫ್ಲೈಓವರ್‍ನಲ್ಲಿ ಭಾರೀ ವಾಹನಗಳ ಓಡಾಟಕ್ಕೆ ಪ್ರವೇಶ ನಿರ್ಬಂಧ ಮುಂದುವರಿಯಲಿದ್ದು, ಮುಂದಿನ ವರ್ಷ ಜನವರಿಗೆ ಮುಕ್ತವಾಗುವ ಸಾಧ್ಯತೆಗಳಿವೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ ತಾಂತ್ರಿಕ ತಜ್ಞರ ತಂಡದ ಶಿಫಾರಸ್ಸಿನ ಮೇರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫ್ಲೈಓವರ್ ವ್ಯಾಪ್ತಿಯಲ್ಲಿರುವ ಹಳೆಯ ಕೇಬಲ್‌ಗಳನ್ನು ಹೊಸ ಪ್ರಿಸ್ಟ್ರೇಸ್ಡ್ ಕೇಬಲ್‌ಗಳೊಂದಿಗೆ ಬದಲಾಯಿಸಲು ಪ್ರಾರಂಭಿಸಿದೆ.
ಆದರೆ ಕಾಮಗಾರಿ ಮುಗಿಯಲು ಇನ್ನೂ ೫-೬ ತಿಂಗಳು ಬೇಕಾಗಬಹುದು. ೪ ಕಿ.ಮೀ ಉದ್ದದ ಮೇಲ್ಸೇತುವೆಯ ಉದ್ದಕ್ಕೂ ಹಳೆಯ ಕೇಬಲ್‌ಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ನಡೆಸಲು ೩೦ ಕೋಟಿ ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿದೆ.
ಕೇಬಲ್ ಅಳವಡಿಕೆ ಕಾರ್ಯ ಕಳೆದ ೪-೫ ತಿಂಗಳಿನಿಂದ ನಡೆದರೂ ಕಾಮಗಾರಿ ಪ್ರಾಪರ್ ಆಗಿ ನಡೆದಿಲ್ಲ. ಹಳೆಯ ಕೇಬಲ್‌ಗಳಿಗೆ ಅತ್ಯಾಧುನಿಕ ಕೇಬಲ್ ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಈ ಮೇಲ್ಸೇತುವೆಯ ೧೦೨ ಮತ್ತು ೧೦೩ನೇ ಕಂಬಗಳ ನಡುವೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಈ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು ೨೦೨೧ರ ಡಿಸೆಂಬರ್ ೨೫ರಿಂದ ನಿರ್ಬಂಧಿಸಲಾಗಿದೆ.
ಕೇಬಲ್ ಸಮಸ್ಯೆ ಬಗ್ಗೆ ತಜ್ಞರ ಪ್ರಕಾರ, ಒಂದು ಕಂಬದಿಂದ ಇನ್ನೊಂದು ಕಂಬದ ನಡುವೆ ಜೋಡಿಸುವ ಸೆಗ್ಮೆಂಟ್‌ನಲ್ಲಿ ರಂದ್ರ ಕೊರೆದು ಕೇಬಲ್ ತೂರಿಸಿ ಎಳೆದು ಬೋಲ್ಟ್ ಹಾಕಲಾಗುತ್ತದೆ. ಕೇಬಲ್‌ಗಳನ್ನು ಎಳೆದು ಕಟ್ಟಿದ ಜಾಗವನ್ನು ಕಾಂಕ್ರೀಟ್‌ನಿಂದ ತುಂಬಿ ಗಟ್ಟಿಗೊಳಿಸಲಾಗುತ್ತದೆ. ತುಮಕೂರು ರಸ್ತೆ ಮೇಲ್ಸೇತುವೆಯಲ್ಲಿ ಅಳವಡಿಸಿದ ನಾಲ್ಕೈದು ಕೇಬಲ್‌ಗಳಲ್ಲಿ ಕೆಲವು ಶಿಥಿಲವಾಗಿರುವ ಸಾಧ್ಯತೆ ಇದೆ
ರಾಜ್ಯದ ಅರ್ಧ ಜಿಲ್ಲೆಗಳು, ಹೊರ ರಾಜ್ಯಗಳಿಗೆ ಇದೇ ಫ್ಲೈಓವರ್ ಮೂಲಕವಾಗಿಯೇ ಭಾರೀ ಗಾತ್ರದ ವಾಹನಗಳು ಸಂಚರಿಸಬೇಕು. ಆದರೆ ಪೀಕ್ ಹವರ್ ನಲ್ಲಿ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಗಾತ್ರದ ವಾಹನ ಸವಾರರು ನಿತ್ಯ ಪರದಾಡುತ್ತಿದ್ದು, ಈ ಪರದಾಟ ಮುಂದಿನ ವರ್ಷದ ತನಕವೂ ಇರಲಿದೆ.