ಪೀಡಕ ಸರ್ಕಾರಗಳಿಂದ ಜನ ಕಲ್ಯಾಣ ನಿರೀಕ್ಷೆ ಸಾಧ್ಯವಿಲ್ಲ: ಮಹಿಮ ಪಟೇಲ್

ಸಿರಾ,ಸೆ. ೧೭- ಕೊರೊನಾ ಕಾರಣದಿಂದ ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಕುಸಿದಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಣಕಾಸು ಪರಿಸ್ಥಿತಿ ಸರಿ ಇಲ್ಲ. ಹಣ ಇಲ್ಲದ ಸರ್ಕಾರಗಳಿಂದ ಜನರನ್ನು ಹಿಂಸೆಗೆ ಒಳಪಡಿಸುವ ವ್ಯವಸ್ಥೆ ನಿರ್ಮಾಣಗೊಳ್ಳುತ್ತಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಪಟೇಲ್ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧೯೮೩ರಲ್ಲಿ ಜನತಾ ಪರಿವಾರ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಹೆಚ್ಚು ಗಮನ ಹರಿಸಿತ್ತು. ಆದರೆ ಇಂದು ಸರ್ಕಾರಗಳು ನಂಬರ್ ಗೇಮ್ ನಡುವೆ ಸಿಕ್ಕಿ ಹಾಕಿಕೊಂಡು ಅಧಿಕಾರಕ್ಕಾಗಿ ಏನನ್ನಾದರೂ ಮಾಡುವ ಪರಿಸ್ಥಿತಿಗೆ ಬಂದು ತಲುಪಿವೆ. ಜನರನ್ನು ಸಶಕ್ತೀಕರಣಗೊಳಿಸ ಬೇಕಿರುವ ಸರ್ಕಾರಗಳು ಜನಪೀಡಕ ಸರ್ಕಾರಗಳಾಗಿ ಬದಲಾಗಿದ್ದು, ಶಾಸಕರನ್ನು ಕೊಳ್ಳುವ ಮಟ್ಟಿಗೆ ವ್ಯವಸ್ಥೆ ಕುಸಿದಿದೆ. ಮ್ಯಾಜಿಕ್ ನಂಬರ್ ಒದಗಿಸುವ ಶಾಸಕರು ಹೇಳಿದಂತೆ ಸರ್ಕಾರ ಕುಣಿಯುವ ಅನಿವಾರ್ಯತೆಗೆ ಮುಖ್ಯಮಂತ್ರಿ, ಮಂತ್ರಿ ಮಂಡಲ ಸಿಲುಕಿದ್ದಾರೆ ಎಂದರು.
ನಮ್ಮ ಅಜೆಂಡಾ ಗ್ರಾಮಸ್ವರಾಜ್ ಆಗಿದೆ. ಮೌಲ್ಯಯುತ ರಾಜಕಾರಣಕ್ಕೆ ಈಗಲೂ ಬೆಲೆ ನೀಡುವ ಹಳೆ ಮತ್ತು ಹೊಸ ತಲೆಮಾರುಗಳನ್ನು ಕಲೆ ಹಾಕುವ ಮೂಲಕ ಜೆಡಿಯು ಪಕ್ಷವನ್ನು ಬಲಪಡಿಸುವ ಯತ್ನ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಭದ್ರವಾದ ಸ್ವಾವಲಂಬಿ ಪಂಚಾಯತ್ ವ್ಯವಸ್ಥೆ ನಿರ್ಮಾಣಕ್ಕಾಗಿ ಹಳ್ಳಿಯಿಂದ ಪಕ್ಷವನ್ನು ಕಟ್ಟುವ ಯತ್ನ ನಡೆಸುತ್ತಿದ್ದೇವೆ. ಇದೇ ೧೮ನೇ ತಾರೀಖು ಕೋಲಾರದಿಂದ ಬೆಂಗಳೂರಿನವರೆಗೆ ಕರ್ನಾಟಕದ ಕಲ್ಯಾಣಕ್ಕಾಗಿ ಜನತಾ ಪರಿವಾರದ ಪಾದಯಾತ್ರೆ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ದಂಡಿಯಾತ್ರೆ ಮಾದರಿಯಲ್ಲಿ ನಡೆಸಲಾಗುವ ಈ ಯಾತ್ರೆ, ಬೀದರ್‍ನಿಂದ ನಂತರ ಹಲವಾರು ಮಜಲುಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಮೂಲಕ ಜನ ಜಾಗೃತಿ ಮೂಡಿಸಲಿದ್ದೇವೆ. ಇದಕ್ಕೆ ರಂಗಕರ್ಮಿಗಳು, ರೈತ ಸಂಘ ಮತ್ತಿತರೆ ಸಂಘಟನೆಗಳ ಬೆಂಬಲ ಕೋರಿದ್ದೇವೆ ಎಂದರು.
ಶಾಸಕ ಬಿ.ಸತ್ಯನಾರಾಯಣ ಅವರು ನಿಧನರಾಗಿದ್ದು, ನಮ್ಮ ತಂದೆಯವರ ಸಂಪುಟ ಸಭೆಯಲ್ಲಿ ಮಂತ್ರಿಗಳಾಗಿದ್ದರು. ಅವರು ನನಗೂ ಆತ್ಮೀಯರಾಗಿದ್ದರು. ಅವರ ಮನೆಗೆ ತೆರಳಿ, ಅವರ ಶ್ರೀಮತಿ ಮತ್ತು ಕುಟುಂಬದವರನ್ನು ಸಂತೈಸಿ ಬಂದಿದ್ದೇವೆ. ಸದ್ಯದಲ್ಲೇ ಸಿರಾ ವಿಧಾನಸಭೆ ಉಪಚುನಾವಣೆ ನಡೆಯಲಿದೆ. ಅದರಲ್ಲಿ ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದೇವೆ. ಸ್ಥಳೀಯ ಚೇತನ್ ಕುಮಾರ್ ಲಿಂಗದಹಳ್ಳಿ ಕೂಡಾ ಆಕಾಂಕ್ಷಿಗಳಾಗಿದ್ದಾರೆ. ಇಲ್ಲಿಂದಲೇ ಹೊಸ ಪರಿವರ್ತನೆ ಆರಂಭಗೊಳ್ಳಲಿ ಎನ್ನುವುದು ನಮ್ಮ ಆಶಯ. ಮುಂದಿನ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವ ಮೂಲಕ ನಮ್ಮ ಶಕ್ತಿಯನ್ನು ಪ್ರದರ್ಶಿಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮುಖಂಡ ಜಿ.ವಿ.ರಾಜಚಂದ್ರಯ್ಯ, ಕೆ.ರವಿ, ಡಾ. ನಾಗರಾಜು, ಶಿವರಾಮು, ಸೂರ್ಯಪ್ರಕಾಶ್, ಲಕ್ಕಣ್ಣ, ಮಧುಗಿರಿ ನಾಗಭೂಷಣ್, ಗಂಗರಾಜು ಮತ್ತಿತರರು ಉಪಸ್ಥಿತರಿದ್ದರು.