ಪಿ.ಯು. ಕಾಲೇಜ್ ನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.18: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಬಳ್ಳಾರಿ ವತಿಯಿಂದ ಸರ್ಕಾರಿ ಮಾಜಿ ಪುರಸಭೆ ಪದವಿ ಪೂರ್ವ ಕಾಲೇಜು, ಬಳ್ಳಾರಿಯಲ್ಲಿ ದಿವಂಗತ ಕುಸುಮ ಬಾಯಿ ಮತ್ತು ದಿವಂಗತ ಸತ್ಯನಾರಾಯಣ ರಾವ್ ಸ್ಮಾರಕದತ್ತಿ, ಶ್ರೀ ಗದ್ದಿಕೇರಿ ತಿಪ್ಪಾರೆಡ್ಡಿ ಷಣ್ಮುಖಪ್ಪ ಮತ್ತು ನಾಗಮ್ಮ ಸ್ಮಾರಕದತ್ತಿ, ಶ್ರೀಮತಿ ಬಿ ಆರ್ ಗೌರಮ್ಮ ಗುರುಭೀಮನಗೌಡ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಸ್ಕೃತ ಉಪನ್ಯಾಸಕರಾದ ಮಹಿಪತಿ ರವರು ಪ್ರಾರ್ಥನೆಯನ್ನು ನಡೆಸಿಕೊಟ್ಟರು ನಾಡಗೀತೆಯನ್ನು ಕನ್ನಡ ಉಪನ್ಯಾಸಕರಾದ ಕೆ ಸುಂಕಪ್ಪ ಸರ್ ರವರು ನೆರವೇರಿಸಿಕೊಟ್ಟರು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾಕ್ಟರ್ ಆರ್ ಪುರುಷೋತ್ತಮರೆಡ್ಡಿ ಉದ್ಘಾಟಿಸಿ ತಮ್ಮ ಉದ್ಘಾಟನೆ ನುಡಿಯಲ್ಲಿ ಇಂದಿನ ವಿದ್ಯಾರ್ಥಿಗಳು ಸಾಮಾಜಿಕ ಮೌಲ್ಯಗಳು ಮತ್ತು ನೈತಿಕ ಮೌಲ್ಯಗಳ ಅವಶ್ಯಕತೆ ಅತ್ಯಗತ್ಯವಾಗಿ ಬೇಕಾಗಿದೆ ಹಾಗೂ ಹಿರಿಯರ ಬಗ್ಗೆ ಗೌರವ ಮತ್ತು ಸಾಮಾಜಿಕ ಕಳಕಳಿ ಹಿಂದಿನ ಯುವಕರಲ್ಲಿ ಮಾಯವಾಗುತ್ತಿದೆ ಅದನ್ನು ಶಾಲಾ-ಕಾಲೇಜುಗಳಲ್ಲಿ ಪಾಠದ ಜೊತೆಗೆ ಆಗಾಗ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಜೀವನಕ್ಕೆ ಬೇಕಾಗುವ ಮೌಲ್ಯಗಳನ್ನು ತಿಳಿಸಿದಾಗ ಮಕ್ಕಳು ಜವಾಬ್ದಾರಿತ ಪ್ರಜೆಗಳಾಗಿ ಜೀವಿಸಲು ಸಹಾಯಕವಾಗುತ್ತದೆ ಎಂದು ತಮ್ಮ ಉದ್ಘಾಟನಾ ನುಡಿಯಲ್ಲಿ ನುಡಿದರು.
ದತ್ತಿ ಉಪನ್ಯಾಸವನ್ನು ನೀಡಿದ ಹಿರಿಯ ಬಂಡಾಯ ಸಾಹಿತಿಗಳು ಆದಂತಹ ಶ್ರೀಯುತ ಪಿ ಆರ್ ವೆಂಕಟೇಶ್ ರವರು ತಮ್ಮ ಉಪನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಮತ್ತು ಬೌದ್ಧಿಕ ವೈಶಾಲ್ಯತೆಯನ್ನು ಬೆಳೆಸುವಲ್ಲಿ ತಂದೆ ತಾಯಿಗಳ ಪಾತ್ರ ಹಾಗೂ ಬೋಧಕರ ಪಾತ್ರ ಬಹಳ ಪ್ರಮುಖವಾಗಿದೆ ಹಾಗೂ ಗಾಂಧೀಜಿಯ ಸತ್ಯ ಪ್ರಾಮಾಣಿಕತೆಯ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕೆಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಂಡಾಸದ ಮಲ್ಲಿಕಾರ್ಜುನ, ಉಪನ್ಯಾಸಕರಾದ ಜಿ ಮಧುಸೂದನ್ ರೆಡ್ಡಿ, ಕೆ ಪಿ ಮಂಜುನಾಥ್ ರೆಡ್ಡಿ ,ಡಾಕ್ಟರ್ ಏರ್ರೆಪ್ಪ ,ನಿಕಟ ಪೂರ್ವ ಅಧ್ಯಕ್ಷರಾದ ಕೆ ಸುಂಕಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪಿ ನಾಗೇಶ್ವರ ರಾವ್ ವಹಿಸಿಕೊಂಡು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಇಂದಿನ ಮಕ್ಕಳು ಹಿರಿಯರ ಬಗ್ಗೆ ತಾತ್ಸಾರ ಭಾವನೆಗಳನ್ನು ತಾಳಿದ್ದಾರೆ ಮಕ್ಕಳಿಗೆ ಹಿರಿಯರು ಬೆಳೆದು ಬಂದ ದಾರಿ ಅವರ ಗುಣ ಸ್ವಭಾವಗಳು ಮಕ್ಕಳಿಗೆ ಮಾರ್ಗದರ್ಶನವಾಗುತ್ತವೆ ಹಿರಿಯರ ಸಲಹೆ ಸೂಚನೆಗಳನ್ನು ಶಿರಸಾ ವಹಿಸಿ ಪಾಲಿಸುವುದು ಇಂದಿನ ಯುವಕರ ಕರ್ತವ್ಯವಾಗಿದೆ ಎಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ನುಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ತಾಲೂಕು ಘಟಕದ ಅಧ್ಯಕ್ಷರಾದ ನಾಗರೆಡ್ಡಿ ಕೆ ವಿ ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸಾಹಿತ್ಯ ಪರಿಷತ್ತು ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ದತ್ತಿ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಕ್ಕಳಿಗೆ ಪಾಠದ ಜೊತೆಗೆ ಸಾಹಿತ್ಯ ಕಲೆ ಸಂಗೀತ ಬೆಳೆಸಿಕೊಳ್ಳಲು ಸಾಹಿತ್ಯ ಪರಿಷತ್ತು ಸದಾ ಸಿದ್ದಸ್ತವಾಗಿದೆ, ಯುವಕರನ್ನು ಸಾಹಿತ್ಯದ ಕಡೆಗೆ ಸೆಳೆಯಲು ಪರಿಷತ್ತಿನ ನಡೆ ಶಾಲಾ-ಕಾಲೇಜಿ ನಡೆಗೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ನುಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಕಾರ್ತಿಕ್ ಮರಿಸ್ವಾಮಿ ಮಠ ನಿರ್ವಹಿಸಿ ಗಣ್ಯಮಾನ್ಯರನ್ನು ಸ್ವಾಗತಿಸಿದರು, ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಶರಣಬಸವ ಎಂ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಗಣ್ಯಮಾನ್ಯರಿಗೆ ಕೊನೆಯಲ್ಲಿ ವಂದಿಸಿದರು ಇಂತಹ ಕಾರ್ಯಕ್ರಮಗಳನ್ನು ನಮ್ಮ ಸಾಹಿತ್ಯ ಪರಿಷತ್ತು ನಿರಂತರವಾಗಿ ನಡೆಸುತ್ತಿದೆ ಶಾಲಾ-ಕಾಲೇಜಿನ ಮುಖ್ಯ ಗುರುಗಳು ಹಾಗೂ ಆಚಾರ್ಯರು ಇಂತಹ ಅವಕಾಶಗಳನ್ನು ನಮಗೆ ಕಲ್ಪಿಸಿ ಕೊಡಬೇಕೆಂದು ವಿನಂತಿಸಿಕೊಂಡರು