ಪಿ.ಟಿ.ಭರತ್‍ಗೆ ಜಯ, ಪಿ.ಟಿ.ಶಿವಾಜಿನಾಯ್ಕ ಮುಖಭಂಗ

ಹರಪನಹಳ್ಳಿ.ಡಿ.31 : ಪಟ್ಟಣದ ಹೆಚ್‍ಪಿಎಸ್ ಕಾಲೇಜಿನಲ್ಲಿ ಗ್ರಾಮ ಪಂಚಾಯ್ತಿಯ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಗುರುವಾರ ಬೆಳಗಿನಜಾವ ಸಂಪೂರ್ಣ ಫಲಿತಾಂಶ
ದೊರೆಯಲಿದೆ. ಎಣಿಕೆ ಕಾರ್ಯದಲ್ಲಿ ಅಭ್ಯರ್ಥಿಗಳು ಎರಡ್ಮೂರು ಬಾರಿ ಮರು ಎಣಿಕೆಗೆ ಮನವಿ
ಮಾಡುತ್ತಿರುವ ಪರಿಣಾಮ ಎಣಿಕೆ ಕಾರ್ಯ ನಿಧಾನವಾಗುತ್ತಿದೆ.
ತಾಲ್ಲೂಕಿನ ಮಾಡ್ಲಿಗೇರೆ ಗ್ರಾ.ಪಂ ವ್ಯಾಪ್ತಿಯ ಕಾನಹಳ್ಳಿ ಗ್ರಾಮದ ಅಭ್ಯರ್ಥಿ ಎಂ.ನಿರ್ಮಲ 340 ಮತಗಳು ಪಡೆದಿದ್ದರೆ, ಪ್ರತಿಸ್ಪರ್ಧಿ ಪೂಜಾರ ಸುಧಾ 341 ಮತಗಳನ್ನು ಪಡೆದುಕೊಂಡು ಕೇವಲ 1 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಪ್ರತಿಸ್ಪರ್ಧಿ ಮರುಮತ ಎಣಿಕೆ ಮಾಡುವಂತೆ ಮನವಿ ಮಾಡಿದ್ದು, ಮರು ಎಣಿಕೆಯಲ್ಲಿಯೂ ಕೂಡ ಸದರಿ ಫಲಿತಾಂಶ ಬಂದಿತ್ತು. ಆದರೆ ಪಟ್ಟುಬಿಡದ ಅಭ್ಯರ್ಥಿ ಮೂರನೇ ಬಾರಿಗೆ ಮರು ಎಣಿಕೆ ಮನವಿ ಮಾಡಿದ್ದರಿಂದ ವಿಡಿಯೋ ಮೂಲಕ ಮರು ಎಣಿಕೆ ಕಾರ್ಯ ನಡೆಯುತ್ತಿದೆ.
ಉಚ್ಚಂಗಿದುರ್ಗ ಗ್ರಾಮದ 4ನೇ ವಾರ್ಡ್ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾಕಮ್ಮ
413 ಮತಗಳನ್ನು ಪಡೆದು 1 ಮತಗಳ ಅಂತರದಿಂದ ಜಯಶಾಲಿ ಆಗಿದ್ದರು. ಆದರೆ
ಪ್ರತಿಸ್ಪರ್ಧಿಯಾಗಿದ್ದ ಉಮಾದೇವಿ ಅವರಿಗೆ 2 ಅಂಚೆ ಮತಗಳು ಬಂದಿದ್ದ ಪರಿಣಾಮ ಸಾಕಮ್ಮ
ಬದಲಾಗಿ ಉಮಾದೇವಿ 414 ಮತಗಳೊಂದಿಗೆ 1 ಮತದಿಂದ ವಿಜೇತರಾಗಿದ್ದರು. ಹೀಗಾಗಿ ಅಭ್ಯರ್ಥಿ ಸಾಕಮ್ಮ ಮರು ಎಣಿಕೆ ಮನವಿ ಸಲ್ಲಿಸಿದ್ದರಿಂದ ಮರು ಎಣಿಕೆ ಕಾರ್ಯ ನಡೆಯುತ್ತಿದೆ.
ತೋಗರಿಕಟ್ಟೆ ಗ್ರಾ.ಪಂ ಗೌರಿಹಳ್ಳಿ ಗ್ರಾಮದ ವಾರ್ಡ್ ನಂ.2ರಲ್ಲಿ ಎಸ್ಸಿ ಮೀಸಲು ಕ್ಷೇತ್ರದ ಅಭ್ಯರ್ಥಿ ಮಾಲಶ್ರೀ 81 ಮತಗಳನ್ನು ಪಡೆದಿದ್ದರೆ, ಪ್ರತಿಸ್ಪರ್ಧಿ ಲಲಿತಾಬಾಯಿ 79 ಮತಗಳನ್ನು ಪಡೆದುಕೊಂಡಿದ್ದಾರೆ. ಕೇವಲ 2 ಮತಗಳ ಅಂತರದಿಂದ ಮಾಲಶ್ರೀ ಗೆಲುವು ದಾಖಲಿಸಿದ್ದಾರೆ. ತೆಲಿಗಿ ಗ್ರಾಮ ಪಂಚಾಯತಿ ವಾರ್ಡ್ ನಂ.2 ಅಭ್ಯರ್ಥಿಗಳಾದ ಎಸ್.ಎಂ.ಯುವರಾಜ್ ಮತ್ತು ಹೊನ್ನಪ್ಪ ಅವರು ತಲಾ 428 ಮತಗಳನ್ನು ಪಡೆದ ಹಿನ್ನೆಲೆಯಲ್ಲಿ ಮರು ಎಣಿಕೆ ನಡೆಸಲಾಯಿತು. ಮರು ಎಣಿಕೆಯಲ್ಲಿ ಹೊನ್ನಪ್ಪಗೆ 426 ಮತಗಳು ಲಭಿಸಿದವು. ಯುವರಾಜ್‍ಗೆ 434 ಮತಗಳು ಲಭಿಸಿದ್ದು, 8 ಮತಗಳ ಅಂತರದಿಂದ ಯುವರಾಜ್‍ಗೆ ಗೆಲುವು ಪಡೆದಿದ್ದಾರೆ.
ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಅವರ ಪುತ್ರ ಪಿ.ಟಿ.ಭರತ್ ಅವರು ಅವರ ಚಿಕ್ಕಪ್ಪ
ಪಿ.ಟಿ.ಶಿವಾಜಿನಾಯ್ಕ ಅವರಿಗೆ ಸೋಲುಣಿಸುವ ಮೂಲಕ ಎರಡನೇ ಬಾರಿ ಗ್ರಾ.ಪಂಗೆ ಪ್ರವೇಶ
ಮಾಡಿದ್ದಾರೆ. ಚಿಕ್ಕಪ್ಪನೇ ಎದುರಾಳಿಯಾಗಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರಿಂದ ಚುನಾವಣೆ ಎದುರಿಸಿ 729 ಮತಗಳನ್ನು ಪಡೆದು 232 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಹಿರಿಯ ಸಹೋದರ ಪಿ.ಟಿ.ಪರಮೇಶ್ವರನಾಯ್ಕ ಅವರ ಪುತ್ರನ ವಿರುದ್ದ ಸೋಲುವ ಮೂಲಕ ಪ್ರಥಮ ಬಾರಿಯ ಚುನಾವಣೆಯಲ್ಲಿ ಪಿ.ಟಿ.ಶಿವಾಜಿನಾಯ್ಕ ಮುಖಭಂಗ ಅನುಭವಿಸಿದ್ದಾರೆ. ಮಾಜಿ ಸಚಿವ ಸ್ವಗ್ರಾಮ ಲಕ್ಷ್ಮಿಪುರ ಗ್ರಾಮದ ಎಸ್ಸಿ ಮಹಿಳೆ ಸವಿತಾಬಾಯಿ-615 ಮತ, ಎಸ್ಟಿ ಮಹಿಳೆ ಮೀಸಲು ಹನುಮಕ್ಕ-408 ಮತ, ಎಸ್ಸಿ ಮೀಸಲು ಸ್ಥಾನದಿಂದ ಹೇಮರಾಜನಾಯ್ಕ 598 ಮತಗಳು ಪಡೆದು ಗೆಲುವು ದಾಖಲಿಸಿದ್ದಾರೆ. ಇಲ್ಲಿ 35 ಮತಗಳು ತಿರಸ್ಕೃತವಾಗಿದೆ.
ಮತ ಪತ್ರಗಳಲ್ಲಿ ಹೆಬ್ಬೆಟ್ಟು ಒತ್ತಿರುವುದು, ಖಾಲಿ ಬ್ಯಾಲೆಟ್ ಮತ್ತು ಅಡ್ಡ ಮತದಾನ
ಮಾಡಿರುವುದು ಕಂಡು ಬಂತು. ಮತ ಎಣಿಕೆ ಕಾರ್ಯ ಸುಮಾರು 8.30ರ ಸುಮಾರಿಗೆ ಮತದಾನ
ಬಾಕ್ಸ್‍ಗಳನ್ನು ಎಣಿಕೆ ಕೊಠಡಿಗೆ ತರಲಾಯಿತು. ಮೊದಲನೇ ಸುತ್ತು ಎಣಿಕೆ ಕಾರ್ಯ ಮಧ್ಯಾಹ್ನ 3.30ಕ್ಕೆ ಅಂತ್ಯಗೊಂಡಿದ್ದು, ಎರಡನೇ ಸುತ್ತು ಎಣಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 5 ಹಂತದಲ್ಲಿ ಎಣಿಕೆ ಕಾರ್ಯ ನಡೆಯುತ್ತಿದ್ದು, ಗುರುವಾರ ಬೆಳಗಿನಜಾವ ಸಂಪೂರ್ಣ ಫಲಿತಾಂಶ ಸಿಗುವ ನಿರೀಕ್ಷೆಯಿದೆ. ಡಿವೈಎಸ್ಪಿ ಹಾಲಮೂರ್ತಿರಾವ್ ಮತ್ತು ಸಿಪಿಐ ಕೆ.ಕುಮಾರ್, ಪಿಎಸ್‍ಐ ಪಿ.ಪ್ರಕಾಶ್ ನೇತೃತ್ವದಲ್ಲಿ ಪೆÇಲೀಸ್ ಸರ್ಪಗಾವಲು ಹಾಕಲಾಗಿದೆ. ಅಪರ ಜಿಲ್ಲಾದಿಕಾರಿ ಮಂಜುನಾಥ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪವಿಭಾಗಾದಿಕಾರಿ ವಿ.ಕೆ.ಪ್ರಸನ್ನಕುಮಾರ್, ತಹಶೀಲ್ದಾರ್‍ಎಲ್.ಎಂ.ನಂದೀಶ್ ಅವರು ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.
ಮತ ಎಣಿಕೆ ಕೇಂದ್ರದ ಹೊರಗೆ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಅಭ್ಯರ್ಥಿಗಳ ಫಲಿತಾಂಶ ಘೋಷಣೆ ಆಗುತ್ತಿದ್ದಂತೆಯೇ ಅವರ ಬೆಂಬಲಿಗರು ಜಯಕಾರ ಹಾಕಿ ಹೂವಿನಹಾರ ಮತ್ತು ಬಣ ಬಳಿದು ಸಂಭ್ರಮಿಸಿದರು.