
ಕಲಬುರಗಿ,ಮೇ.20:ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಪಿ.ಎಮ್. ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಧನಸಹಾಯ ಪಡೆಯಲು ರೈತರು ಇ-ಕೆವೈಸಿ (e-KYC) ಮಾಡಿಸುವುದು ಕಡ್ಡಾಯವಾಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ರೈತರಿಗೆ ಕಳೆದ ಒಂದು ವರ್ಷದಿಂದ ಹಲವಾರು ಬಾರಿ ತಿಳಿಸಿದ್ದರೂ ಸಹ ಈ ಜಿಲ್ಲೆಯಲ್ಲಿ ಇನ್ನು 77,628 ರೈತರು ಇ-ಕೆವೈಸಿ ಮಾಡಿಸದೇ ಇರುವುದು ಕಂಡು ಬಂದಿರುತ್ತದೆ. ಇ-ಕೆವೈಸಿ ಮಾಡಿಸದಿದ್ದಲ್ಲಿ ಪಿ.ಎಮ್. ಕಿಸಾನ ಸಮ್ಮಾನ ಯೋಜನೆಯಡಿ ರೈತರಿಗೆ ನೀಡಲಾಗುವ ಆರ್ಥಿಕ ಧನಸಹಾಯವನ್ನು ಸ್ಥಗಿತಗೂಳಿಸಲಾಗುತ್ತದೆ. ಸದರಿ ಯೋಜನೆಯಡಿ ನೈಜ ಫಲಾನುಭವಿಗಳಿಗೆ ಮಾತ್ರ ಆಯ್ಕೆಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಹೊಸ ಆದೇಶ ಹೊರಡಿಸಿದೆ.
ಪಿ.ಎಮ್.ಕಿಸಾನ ಸಮ್ಮಾನ ನಿಧಿ ಯೋಜನೆಯಡಿ ಹತ್ತು ಸಾವಿರ ರೂ.ಗಳ ಆರ್ಥಿಕ ಸೌಲಭ್ಯ ಪಡೆಯುವ ರೈತ ಫಲಾನುಭವಿಗಳು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಇ-ಕೆವೈಸಿ ಮಾಡಿಸಿಕೊಳ್ಳದೇ ಇರುವ ಫಲಾನುಭವಿಗಳಿಗೆ (ಕೇಂದ್ರ ಸರ್ಕಾರದಿಂದ ಆರು ಸಾವಿರ ರೂ. ಹಾಗೂ ರಾಜ್ಯಸರ್ಕಾರದಿಂದ ನಾಲ್ಕು ಸಾವಿರ ರೂ.ಗಳ) ಆರ್ಥಿಕ ಸೌಲಭ್ಯ ದೊರೆಯುವುದಿಲ್ಲ. ಈ ವರೆಗೂ ಈ ಕೆವೈಸಿ ಮಾಡಿಸದೇ ಇರುವ ರೈತ ಫಲಾನುಭವಿಗಳು ತಮ್ಮ ಆಧಾರ್ ಹಾಗೂ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಈ ಕೆಳಕಂಡ ವಿಧಾನಗಳಲ್ಲಿ ಮಾಡಬಹುದಾಗಿದೆ.
ಅರ್ಹ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಸಾಮಾನ್ಯ ಗ್ರಾಹಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಓಟಿಪಿ ಮೂಲಕ ಇ-ಕೆವೈಸಿ ಮಾಡಿಸಬಹುದಾಗಿದೆ. ಫಲಾನುಭವಿಗಳು ಸ್ವತಃ ತಾವೇ ಪಿಎಂ ಕಿಸಾನ್ ಪೋರ್ಟಲ್ ಮೂಲಕ ಮೊಬೈಲ್‍ಗೆ ಓಟಿಪಿ ಪಡೆದು ಇ-ಕೆವೈಸಿ ಮಾಡಬಹುದಾಗಿದೆ. ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ಮಾಡಿ ಹೊಸ ಪೋಸ್ಟಲ್ ಅಕೌಂಟ್ ಓಪನ್ ಮಾಡುವ ಮೂಲಕ ಪಿಎಂ ಕಿಸಾನ್ ಇ-ಕೆವೈಸಿ ತ್ವರಿತವಾಗಿ ಮಾಡಿಕೊಳ್ಳುವುದು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಿ.ಎಂ. ಕಿಸಾನ್ ಮೊಬೈಲ್ ಆಪ್‍ನ್ನು ಪ್ಲೇ ಸ್ಟೋರ್‍ದಿಂದ ಡೌನ್‍ಲೋಡ್ ಮಾಡಿಕೊಂಡು ಆಪ್ ಮೂಲಕ ಸ್ವತ: ಫಲಾನುಭವಿಗಳೇ ಮುಖ ಚಹರೆ (Facial authentication) ತೋರಿಸುವ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ.
ಈಗಾಗಲೆ ರೈತರು ಇ-ಕೆವೈಸಿ ಮಾಡಿಸಿದ್ದಲ್ಲಿ ಕೇಂದ್ರ ಸರ್ಕಾರದಿಂದ ಹಂತಹಂತವಾಗಿ ರೈತರ ಖಾತೆಗೆ ಹಣ ಜಮೆಯಾಗಲಿದೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಕೋರಲಾಗಿದೆ.