ಪಿ.ಎಂ ಕೇರ್ಸ್ನಿಂದ 23 ವೆಂಟಿಲೇಟರ್, ಯುಪಿಎಸ್ ಗಳು ಬಂದಿವೆ

ಬೀದರ:ಎ.25: ದೇಶದೆಲ್ಲೆಡೆ ಆಕ್ಸಿಜನ್‌ಗೆ ಬೇಡಿಕೆ ಇದೆ. ಆದರೂ, ಬೀದರ್‌ ಜಿಲ್ಲೆಗೆ ಪ್ರತಿನಿತ್ಯ ಆಕ್ಸಿಜನ್ ಪೂರೈಸಲಾಗುತ್ತಿದೆ, ಹೆಚ್ಚಿನ ಆಕ್ಸಿಜನ್ ಶೇಖರಣೆ ಮಾಡಿಟ್ಟುಕೊಳ್ಳಲು ಸೂಚಿಸಲಾಗಿದೆ’ ಎಂದು ಸಂಸದ ಭಗವಂತ ಖೂಬಾ ಹೇಳಿದರು.

‘ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ, ಆಯಾ ತಾಲ್ಲೂಕಿನ ಜನರಿಗೆ ಅಲ್ಲಿಯೇ ಚಿಕಿತ್ಸೆ ನೀಡಬೇಕು. ಕೋವಿಡ್ ವಾರ್ಡ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಪಿ.ಎಂ. ಕೇರ್ಸ್ ನಿಂದ 23 ವೆಂಟಿಲೇಟರ್ ಯುಪಿಎಸ್‌ಗಳು ಬಂದಿವೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿರುವ ಬೇಡ್‌ಗಳ ಸಂಖ್ಯೆಗಳನ್ನು ಅಸ್ಪತ್ರೆಯ ಹೊರಗಡೆ ರೋಗಿಗಳಿಗೆ ಗೊತ್ತಾಗುವಂತೆ ಬೋರ್ಡ್ ಮೇಲೆ ಹಾಕಿಸಬೇಕು’ ಎಂದು ಸಲಹೆ ನೀಡಿದರು.

‘ತಾಲ್ಲೂಕು ಮಟ್ಟದ ಆಸ್ಪತ್ರೆಗಳ ವೈದ್ಯರು ಕೇವಲ ಬ್ರಿಮ್ಸ್‌ಗೆ ರೋಗಿಗಳನ್ನು ಕಳುಹಿಸಿಕೊಡುವ ಕೆಲಸಕ್ಕೆ ಮುಂದಾಗಬಾರದು. ಅಲ್ಲಿಯೇ ಚಿಕಿತ್ಸೆ ನೀಡಬೇಕು. ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುವ ವೈದ್ಯರನ್ನು ಗುರುತಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.