ಪಿಲಿಕುಳ ಮೃಗಾಲಯಕ್ಕೆ ಬಿಳಿ ಹುಲಿ, ಉಷ್ಟ್ರ ಪಕ್ಷಿ ಸೇರ್ಪಡೆ

ಮಂಗಳೂರು, ಮೇ ೬- ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಚೆನ್ನೈನ ಅರಿಗ್ಣರ್ ಅಣ್ಣ ಮೃಗಾಲಯದಿಂದ ಪಿಲಿಕುಳ ಮೃಗಾಲಯಕ್ಕೆ ಒಂದು ಬಿಳಿ ಹೆಣ್ಣು ಹುಲಿ ಕಾವೇರಿ ಮತ್ತು ಹೆಣ್ಣು ಉಷ್ಟ್ರ ಪಕ್ಷಿಯನ್ನು ತರಿಸಿಕೊಳ್ಳಲಾಗಿದೆ. ಸದ್ಯ ಬಿಳಿ ಹುಲಿ ಹಾಗೂ ಉಷ್ಟ್ರ ಪಕ್ಷಿ ಪ್ರವಾಸಿಗರ ಗಮನ ಸೆಳೆಯುತ್ತಿದ್ದು, ವಿಶೇಷ ಆಕರ್ಷಣೆಯನ್ನು ಪಡೆದಿದೆ.
ಪಿಲಿಕುಳ ಮೃಗಾಲಯದಿಂದ ಒಂದು ಬೆಂಗಾಲ್ ಹುಲಿ ಸಂಜಯ್, ನಾಲ್ಕು ಕಾಡುನಾಯಿಗಳು ಹಾಗೂ ಕೆಲವು ಉರಗಗಳನ್ನು ಕಳುಹಿಸಿಕೊಡಲಾಗುವುದು. ಪಿಲಿಕುಳದಲ್ಲಿ ಈಗಾಗಲೇ ೧೧ ಹುಲಿಗಳು (ಏಳು ಗಂಡು, ನಾಲ್ಕು ಹೆಣ್ಣು) ಮತ್ತು ಎರಡು ಗಂಡು ಉಷ್ಟ್ರ ಪಕ್ಷಿಗಳಿವೆ. ಹೊಸ ಅತಿಥಿಯಾಗಿ ಆಗಮಿಸಿರುವ ಬಿಳಿ ಹುಲಿ ಕಾವೇರಿಯನ್ನು ಕ್ವಾರಂಟೈನ್‌ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಸ್ಥಳೀಯ ಪರಿಸರಕ್ಕೆ ಒಗ್ಗಿದ ನಂತರ ವಾರದೊಳಗೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ಗುಜರಾತಿನ ರಾಜಕೋಟ್ ಮೃಗಾಲಯದಿಂದ ಏಷ್ಯಾಟಿಕ್ ಸಿಂಹ, ಭಾರತೀಯ ತೋಳಗಳು ಮತ್ತು ಕೆಲವು ಅಪರೂಪದ ಪಕ್ಷಿಗಳನ್ನು, ಮಹಾರಾಷ್ಟ್ರದ ಗೋರೆವಾದ ಮೃಗಾಲಯದಿಂದ ಬಿಳಿ ಕೃಷ್ಣಮೃಗಗಳು ಮತ್ತು ಕರಡಿಗಳನ್ನು ಹಾಗೂ ಒಡಿಶಾದ ನಂದನಕಾನನ ಮೃಗಾಲಯದಿಂದ ಅಪರೂಪದ ಹೋಗ್ ಜಿಂಕೆ, ನೀಲಗಾಯಿಗಳು ಮತ್ತು ಪಕ್ಷಿಗಳನ್ನು ಪ್ರಾಣಿ ವಿನಿಯ ಯೋಜನೆಯಡಿ ತರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಕೇಂದ್ರ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ಪಡೆದು ಕಾರ್ಯರೂಪಕ್ಕೆ ತರಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.