
ದಕ್ಷಿಣ ಕನ್ನಡ, ಏ.೨೪-ವಿದ್ಯೆಗೆ ಕೊನೆಯೆಂಬುದಿಲ್ಲ ಎಂಬುದಕ್ಕೆ ಇಲ್ಲೊಂದು ನಿದರ್ಶನ ಮಾದರಿಯಂತಿದೆ. ಬಡತನದಿಂದ ಶಿಕ್ಷಣ ಕನಸು ಮೊಟಕುಗೊಳಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆಯೊಬ್ಬರು ಮತ್ತೆ ಶಿಕ್ಷಣವನ್ನು ಮುಂದುವರೆಸಿ ಕೇವಲ ಎರಡೇ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಿರ್ಣರಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ಅವರು ೨೪ ವರ್ಷಗಳ ಬಳಿಕ ದ್ವಿತೀಯ ಪಿಯು ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ೪೨೧ ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಕಮರಿ ಹೋಗಿದ್ದ ಶಿಕ್ಷಣದ ಕನಸು ಎರಡು ದಶಕಗಳ ಬಳಿಕ ನನಸು ಮಾಡಿಕೊಂಡಿದ್ದಾರೆ.
ಭಾರತಿ ಭಟ್ ಅವರು ಬಾಲ್ಯದಲ್ಲಿಯೇ ಶಿಕ್ಷಣ ಬಗ್ಗೆ ಆಸಕ್ತರಾಗಿದ್ದರು. ಆದರೆ ಬಡತನ ಅವರ ಶಿಕ್ಷಣ ಕನಸಿಗೆ ಕೊಳ್ಳಿಯಿಟ್ಟಿತ್ತು. ಅದರಲ್ಲೂ ೧೯೯೭-೯೮ ರಲ್ಲಿಯೇ ೮ನೇ ತರಗತಿ ಕಲಿಯುತ್ತಿದ್ದ ವೇಳೆ ಭಾರತಿ ಭಟ್ ಅವರ ತಂದೆಯವರ ವಿಯೋಗದಿಂದಾಗಿ ಶಿಕ್ಷಣ ಮೊಟಕುಗೊಳಿಸುವಂತಾಗಿತ್ತು. ಅಲ್ಲಿಗೆ ಅವರ ಶಿಕ್ಷಣದ ಕನಸು ಬಹುತೇಕ ಕಮರಿ ಹೋಗಿತ್ತು.
ಶಿಕ್ಷಣ ನನ್ನ ಜೀವನದಲ್ಲಿಲ್ಲ ಎಂದುಕೊಂಡಿದ್ದ ಭಾರತಿ ಭಟ್ ವೆಂಕಟರಮಣ ಭಟ್ ಎಂಬುವವರ ಜೊತೆ ವಿವಾಹವಾಗಿದ್ದರು. ಅಲ್ಲದೆ ಶಿಕ್ಷಣದ ಆಸೆಯನ್ನು ತೊರೆದಿದ್ದರು. ಆದರೆ ಅದೃಷ್ಟವೆಂಬತೆ ಕಳೆದ ಬಾರಿ ಪಾಣಾಜೆ ಗಾ.ಪಂ ಸದಸ್ಯೆರಾಗಿ ಆಯ್ಕೆಯಾದ ಅವರು, ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು. ಹೀಗೆ ಎರಡು ವರ್ಷದ ಹಿಂದೆ ಅಧ್ಯಕ್ಷೆ ಆಗುತ್ತಲೇ ಅವರ ಶಿಕ್ಷಣದ ಆಸೆ ಮತ್ತೆ ಚಿಗುರೊಡೆದಿತ್ತು. ಹೀಗಾಗಿ ೨೦೨೧-೨೨ನೇ ಸಾಲಿನಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು ಎಸ್‌ಎಸ್‌ಎಲ್‌ಸಿಯಲ್ಲಿ ೫೪% ಅಂಕದೊಂದಿಗೆ ಉತ್ತೀರ್ಣರಾಗಿದ್ದರು.
ಅದಾದ ಮರು ವರ್ಷದಲ್ಲೇ ಮತ್ತೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಭಾರತಿ ಭಟ್ ಅವರು ೪೨೧ ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಿಂದಾಗಿ ಮುಂದಿನ ಉನ್ನತ ಶಿಕ್ಷಣಕ್ಕೆ ಮತ್ತಷ್ಟು ಹುರುಪು ಬಂದಾತಾಗಿದ್ದು, ೨೪ ವರ್ಷಗಳ ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.