ಪಿಯು ಕಾಲೇಜುಗಳ ನೂತನ 1203 ಉಪನ್ಯಾಸಕರಿಗೆ ನೇಮಕಾತಿ ಆದೇಶ: ನಮೋಶಿ

ಕಲಬುರಗಿ,ನ.18: ರಾಜ್ಯದ 1203 ಸರಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಕೌನ್ಸಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಂಡಿತ್ತು. ಆದರೆ ಅವರಿಗೆ ಇಲ್ಲಿಯವರೆಗೆ ನೇಮಕಾತಿ ಆದೇಶ ನೀಡಿರಲಿಲ್ಲ ಆದರೆ ನವೆಂಬರ್ 20ರಂದು ನೂತನ ಉಪನ್ಯಾಸಕರಿಗೆ ಆದೇಶ ನೀಡಲು ಸರ್ಕಾರ ನಿರ್ದೇಶಿಸಿರುವುದಕ್ಕೆ ಶಿಕ್ಷಣ ಸಚಿವ ಸುರೇಶಕುಮಾರ್ ಅವರಿಗೆ ಅಭಿನಂದನೆಯನ್ನು ಸಲ್ಲಿಸುವುದಾಗಿ ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ತಿಳಿಸಿದ್ದಾರೆ.
2015ರಲ್ಲಿ 1203 ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ನಂತರ ವಿಳಂಬವಾಗಿ 2018 ಡಿಸೆಂಬರ್‍ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡಿರುವ ನೂತನ ಉಪನ್ಯಾಸಕರಿಗೆ ಹಿಂದಿನ ಸರ್ಕಾರ ಆದೇಶವೇ ನೀಡಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ನಂತರ ಶಿಕ್ಷಣ ಸಚಿವ ಸುರೇಶಕುಮಾರ್ ಅವರು ಮುತುವರ್ಜಿ ವಹಿಸಿ ಕೌನ್ಸಲಿಂಗ್ ನಡೆಸಿ ಸ್ಥಳ ನಿಯುಕ್ತಿ ಮಾಡಿದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಅರ್ಹತೆ ಮಡೆದ ನೂತನ ಉಪನ್ಯಾಸಕರಿಗೆ ನೇಮಕಾತಿ ಆದೇಶ ನೀಡಿರಲಿಲ್ಲ. ಅದನ್ನು ಚುನಾವಣಾ ಸಂದರ್ಭದಲ್ಲಿ ಅರ್ಹತೆ ಪಡೆದ ಉಪನ್ಯಾಸಕರು ನನಗೆ ಮನವಿ ಸಲ್ಲಿಸಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದೆ ಹೋರಾಟವನ್ನು ಮಾಡಿದ್ದರು. ನಾನು ಅರ್ಹತೆ ಪಡೆದ ಉಪನ್ಯಾಸಕರಿಗೆ ಚುನಾವಣೆ ಮುಗಿದ ತಕ್ಷಣ ಆದೇಶ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ನಾನು ಖುದ್ದಾಗಿ ಶಿಕ್ಷಣ ಸಚಿವರಿಗೆ ಭೇಟಿಯಾಗಿ ವಿಷಯವನ್ನು ಚರ್ಚಿಸಿದ್ದೆ. ಚುನಾವಣಾ ಮುಗಿದ ತಕ್ಷಣ ಆದೇಶ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದರು. ಅದರಂತೆ ದಿನಾಂಕ 20 ರಂದು ಉಪನ್ಯಾಸಕರಿಗೆ ನೇಮಕಾತಿ ಆದೇಶ ನೀಡುವುದರ ಮೂಲಕ ಮಾನ್ಯ ಸಚಿವರು ನನ್ನ ಮನವಿಗೆ ಸ್ಪಂದಿಸಿದ್ದಾರೆ. ನಾನು ಮಾತು ಕೊಟ್ಟಂತೆ ನಿಮ್ಮ ಭರವಸೆ ಈಡೇರಿಸಿದ್ದೇನೆ ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಕೋವಿಡ್ 19ರ ಈ ಸಂಕಷ್ಟದಲ್ಲಿಯೂ ರಾಜ್ಯ ಸರ್ಕಾರ ಯಾವುದೇ ಸರ್ಕಾರಿ, ಅನುದಾನಿತ ನೌಕರರ ಸಂಬಳದಲ್ಲಿ ಯಾವುದೇ ತೊಂದರೆಯಾಗದಂತೆ ರಾಜ್ಯ ಸರ್ಕಾರ ನೋಡಿಕೊಂಡಿದೆ. ರಾಜ್ಯದ ಸರ್ಕಾರಿ ನೌಕರರ, ಶಿಕ್ಷಕರ, ಉಪನ್ಯಾಸಕರ ಪರವಾಗಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲು ಶಿಕ್ಷಣ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡುವುದರ ಮೂಲಕ ನನ್ನ ಮತಕ್ಷೇತ್ರದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಿಗೆ ಆಭಾರಿಯಾಗಿರುವುದಾಗಿ ನಮೋಶಿ ಅವರು ಹೇಳಿದ್ದಾರೆ.