ಪಿಯುಸಿ ಬಾಲಕಿಯರೇ ಮೇಲುಗೈ

ಬೆಂಗಳೂರು,ಏ.೨೧- ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಒಟ್ಟಾರೆ ಶೇ. ೭೪.೬೭ರಷ್ಟು ಫಲಿತಾಂಶ ಬಂದಿದೆ. ಎಂದಿನಂತೆ ಬಾಲಕಿಯರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಂಡಳಿಯ ಅಧ್ಯಕ್ಷ ಎಸ್. ರಾಮಚಂದ್ರನ್ ಅವರು ಫಲಿತಾಂಶದ ವಿವರಗಳನ್ನು ಬಿಡುಗಡೆ ಮಾಡಿದರು.ಈ ವರ್ಷ ಒಟ್ಟಾರೆ ೭,೦೨,೦೬೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ ೫,೨೪,೨೦೯ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಒಟ್ಟಾರೆ ಶೇಕಡಾವಾರು ೭೪.೬೭ ರಷ್ಟು ಫಲಿತಾಂಶ ಬಂದಿದೆ ಎಂದರು.ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದ ಪ್ರಮಾಣ ಏರಿಕೆಯಾಗಿದ್ದು, ಕಳೆದ ವರ್ಷ ಶೇ. ೬೧.೮೮ರಷ್ಟು ಫಲಿತಾಂಶ ಬಂದಿತ್ತು ಎಂದರು.
ಕಲಾ ವಿಭಾಗದಲ್ಲಿ ಶೇ. ೬೧.೨೨ ವಿಜ್ಞಾನ ವಿಭಾಗದಲ್ಲಿ ಶೇ. ೮೫.೭೧ ವಾಣಿಜ್ಯ ವಿಭಾಗದಲ್ಲಿ ಶೇ. ೭೫.೮೯ ರಷ್ಟು ಫಲಿತಾಂಶ ಬಂದಿದೆ ಎಂದು ಅವರು ಹೇಳಿದರು.
ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಬಾಲಕಿಯರ ಉತ್ತೀರ್ಣದ ಪ್ರಮಾಣ ಶೇ. ೮೦.೨೫ ರಷ್ಟಿದ್ದರೆ, ಬಾಲಕರ ಉತ್ತೀರ್ಣದ ಪ್ರಮಾಣ ಶೇ. ೬೯.೦೫ ರಷ್ಟಿದೆ ಎಂದು ಅವರು ತಿಳಿಸಿದರು.ಈ ವರ್ಷ ಕಲಾವಿಭಾಗದಲ್ಲಿ ೨೨೦.೩೫ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದ್ದು, ೧,೩೪,೮೭೬ ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶೇ. ೬೧.೨೨ ರಷ್ಟು ಫಲಿತಾಂಶ ಕಲಾವಿಭಾಗದಲ್ಲಿ ಬಂದಿದೆ.ವಾಣಿಜ್ಯ ವಿಭಾಗದಲ್ಲಿ ೨,೪೦,೧೪೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಇವರಲ್ಲಿ ೧,೮೨,೨೪೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. ೭೫.೮೯ ರಷ್ಟು ಫಲಿತಾಂಶ ವಾಣಿಜ್ಯ ವಿಭಾಗದಲ್ಲಿ ಬಂದಿದೆ.ವಿಜ್ಞಾನ ವಿಭಾಗದಲ್ಲಿ ೨,೪೧,೬೧೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ ೨,೦೭,೦೮೭ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. ೮೫.೭೧ ಲಕ್ಷ ಬಂದಿದ್ದು, ಒಟ್ಟಾರೆ ಶೇ. ೭೪.೬೭ ರಷ್ಟು ಫಲಿತಾಂಶ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಂದಿದೆ ಎಂದರು.ಈ ವರ್ಷ, ೬೯.೮೭೦ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ೩೩,೮೩೩ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಖಾಸಗಿಯಾಗಿ ೨೪,೭೦೮ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೧೦,೬೩೦ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಈ ವರ್ಷ ಉನ್ನತ ಶ್ರೇಣಿಯಲ್ಲಿ ಅಂದರೆ ಶೇ. ೮೫ಕ್ಕಿಂತ ಹೆಚ್ಚು ಅಂಕವನ್ನು ೧,೦೯,೫೦೯ ವಿದ್ಯಾರ್ಥಿಗಳು ಪಡೆದಿದ್ದು, ಪ್ರಥಮ ದರ್ಜೆ ಅಂದರೆ ಶೇ. ೮೫ಕ್ಕಿಂತ ಕಡಿಮೆ ಹಾಗೂ ಶೇ. ೬೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ ೨,೦೪೭.೩೧೫ ದ್ವಿತೀಯ ದರ್ಜೆ ಶೇ. ೬೦ಕ್ಕಿಂತ ಕಡಿಮೆ ಶೇ ೫೦ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ ೯೦,೦೧೪ ಆಗಿದೆ.ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ೭೭,೩೭೧,
ಈ ವರ್ಷ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತೀರ್ಣತೆ ಪ್ರಮಾಣ ಶೇ. ೬೩.೬೮ರಷ್ಟಿದ್ದರೆ, ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ. ೨.೩೦.
ಗ್ರಾಮೀಣರೇ ಮೇಲುಗೈ
ಈ ವರ್ಷದ ಫಲಿತಾಂಶದಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದು, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶೇ. ೭೪.೭೯ ರಷ್ಟಿದ್ದರೆ, ನಗರ ಪ್ರದೇಶದ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶೇ. ೭೪.೬೩ ರಷ್ಟಿದೆ ಎಂದರು.
ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ೬೫ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಪರೀಕ್ಷೆ ಮಾ. ೯ ರಿಂದ ಮಾ. ೨೯ ರವರೆಗೂ ನಡೆದಿತ್ತು. ಮೌಲ್ಯಮಾಪನ ಏ. ೫ ರಿಂದ ಏ. ೧೫ರವರೆಗೂ ನಡೆದಿದ್ದು, ಒಟ್ಟು ೨೩,೬೦೬ ಮೌಲ್ಯಮಾಪನ ಕಾರ್ಯ ನಡೆಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆ ಮೇಲುಗೈ
ಕಳೆದ ವರ್ಷದಂತೆ ಈ ವರ್ಷವು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.೯೫.೩೩ ರಷ್ಟು ಫಲಿತಾಂಶ ಪಡೆದಿದೆ.
ಕಳೆದ ವರ್ಷದಂತೆ ಈ ವರ್ಷವೂ ಉಡುಪಿ ೨ನೇ ಸ್ಥಾನದಲ್ಲಿದ್ದು, ಶೇ. ೯೫.೨೪ ರಷ್ಟು, ಕೊಡಗು ೩ನೇ ಸ್ಥಾನದಲ್ಲಿದ್ದು, ಶೇ. ೯೦.೫೫ ರಷ್ಟು ಫಲಿತಾಂಶ ಪಡೆದುಕೊಂಡಿದೆ.ಉತ್ತರ ಕನ್ನಡ ಜಿಲ್ಲೆ ೪ನೇ ಸ್ಥಾನದಲ್ಲಿದ್ದು, ಶೇ.೮೯.೭೪ ರಷ್ಟು ಫಲಿತಾಂಶ ಪಡೆದುಕೊಂಡಿದೆ. ವಿಜಯಪುರ ಫಲಿತಾಂಶದಲ್ಲಿ ೫ನೇ ಸ್ಥಾನದಲ್ಲಿದ್ದು, ಶೇ.೮೪.೬೯ ರಷ್ಟು ಫಲಿತಾಂಶ ಬಂದಿದೆ.
೧೦೦ಕ್ಕೆ ೧೦೦ರಷ್ಟು ಅಂಕ
ಈ ವರ್ಷದ ಪರೀಕ್ಷೆಯಲ್ಲಿ ಕನ್ನಡದಲ್ಲಿ ೧೦೮೩ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ರಷ್ಟು ಅಂಕ ಪಡೆದಿದ್ದು, ಇಂಗ್ಲೀಷ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕ, ಹಿಂದಿಯಲ್ಲಿ ೩೩ ವಿದ್ಯಾರ್ಥಿಗಳು, ಸಮಾಜ ಶಾಸ್ತ್ರದಲ್ಲಿ ೨೭೫ ವಿದ್ಯಾರ್ಥಿಗಳು, ರಾಜ್ಯಶಾಸ್ತ್ರದಲ್ಲಿ ೨೧೮ ವಿದ್ಯಾರ್ಥಿಗಳು, ವ್ಯವಹಾರ ಅಧ್ಯಯನದಲ್ಲಿ ೨,೨೮೮ ವಿದ್ಯಾರ್ಥಿಗಳು, ಇತಿಹಾಸದಲ್ಲಿ ೨೭೪ ವಿದ್ಯಾರ್ಥಿಗಳು, ಅರ್ಥಶಾಸ್ತ್ರದಲ್ಲಿ ೧೪೧೪ ವಿದ್ಯಾರ್ಥಿಗಳು, ಹಿಂದೂಸ್ಥಾನಿ ಸಂಗೀತದಲ್ಲಿ ೨೮ ವಿದ್ಯಾರ್ಥಿಗಳು, ಸಂಸ್ಕೃತದಲ್ಲಿ ೧,೨೫೦ ವಿದ್ಯಾರ್ಥಿಗಳು, ಉರ್ದುವಿನಲ್ಲಿ ೨೮ ವಿದ್ಯಾರ್ಥಿಗಳು, ಲೆಕ್ಕಶಾಸ್ತ್ರದಲ್ಲಿ ೪೭೫ ವಿದ್ಯಾರ್ಥಿಗಳು, ಸಂಖ್ಯಾಶಾಸ್ತ್ರದಲ್ಲಿ ೧೬೨೭ ವಿದ್ಯಾರ್ಥಿಗಳು, ಮನಃಶಾಸ್ತ್ರದಲ್ಲಿ ೯೫ ವಿದ್ಯಾರ್ಥಿಗಳು, ಭೌತಶಾಸ್ತ್ರದಲ್ಲಿ ೧೫೯೯, ರಸಾಯನಶಾಸ್ತ್ರದಲ್ಲಿ ೩೨೪ ವಿದ್ಯಾರ್ಥಿಗಳು, ಗಣಿತಶಾಸ್ತ್ರದಲ್ಲಿ ೨೭೦೪, ಜೀವಶಾಸ್ತ್ರದಲ್ಲಿ ೯೯೭, ಎಲೆಕ್ಟ್ರಾನಿಕ್ಸ್‌ನಲ್ಲಿ ೩೩೬, ಗಣಕ ವಿಜ್ಞಾನದಲ್ಲಿ ೫೩೩೫ ವಿದ್ಯಾರ್ಥಿಗಳು, ಶಿಕ್ಷಣದಲ್ಲಿ ೪೨೯, ಬೇಸಿಕ್ ಮ್ಯಾಥ್ಸ್‌ನಲ್ಲಿ ೫೩೩, ಮಾಹಿತಿ ತಂತ್ರಜ್ಞಾನದಲ್ಲಿ ೭, ಆಟೋಮೊಬೈಲ್‌ನಲ್ಲಿ ೨೦, ಗೃಹ ವಿಜ್ಞಾನದಲ್ಲಿ ೨೫ ವಿದ್ಯಾರ್ಥಿಗಳು, ಭೂಗೋಳ ಶಾಸ್ತ್ರದಲ್ಲಿ ೭೮೦, ತರ್ಕಶಾಸ್ತ್ರದಲ್ಲಿ ೮, ಐಚ್ಛಿಕ ಕನ್ನಡ ೫, ಫ್ರೆಂಚ್‌ನಲ್ಲಿ ೪೫ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ರಷ್ಟು ಅಂಕ ಪಡೆದಿದ್ದಾರೆ.
ಶೇ. ೧೦೦ ರಷ್ಟು ಫಲಿತಾಂಶ ಸರ್ಕಾರಿ ಕಾಲೇಜುಗಳೇ ಮುಂದು
ಈ ಬಾರಿಯ ಫಲಿತಾಂಶದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. ೬೩.೫೩ ರಷ್ಟು ಫಲಿತಾಂಶ ಬಂದಿದ್ದು, ಅನುದಾನಿತ ಪ.ಪೂ. ಕಾಲೇಜುಗಳಲ್ಲಿ ಶೇ. ೭೧.೨೩ ಫಲಿತಾಂಶ, ಅನುದಾನ ರಹಿತ ಕಾಲೇಜುಗಳಲ್ಲಿ ಶೇ. ೮೩.೭೧, ಕಾರ್ಪೋರೇಷನ್ ಪ.ಪೂ. ಕಾಲೇಜುಗಳಲ್ಲಿ ಶೇ. ೫೬.೦೫, ವಿಭಜಿತ ಪ.ಪೂ. ಕಾಲೇಜುಗಳಲ್ಲಿ ಶೇ. ೮೦.೦೬ ರಷ್ಟು ಫಲಿತಾಂಶ ಬಂದಿದೆ ಎಂದು ಅವರು ವಿವರಿಸಿದರು.
ರಾಜ್ಯದ ೪೨ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಬಂದಿದೆ. ೧೦ ಅನುದಾನಿತ ಪ.ಪೂ. ಕಾಲೇಜುಗಳು ಮತ್ತು ೨೦೪ ಅನುದಾನ ರಹಿತ ಪ.ಪೂ. ಕಾಲೇಜುಗಳು ಶೇ. ೧೦೦ ರಷ್ಟು ಫಲಿತಾಂಶ ಪಡೆದಿವೆ. ೭೩ ಅನುದಾನರಹಿತ ಪದವಿಪೂರ್ವ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ, ೫ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಫಲಿತಾಂಶಗಳನ್ನು ಆಯಾ ಕಾಲೇಜುಗಳಲ್ಲಿ ಪ್ರಕಟಿಸಲಾಗಿದ್ದು, ಆನ್‌ಲೈನ್‌ನಲ್ಲೂ ಫಲಿತಾಂಶಗಳನ್ನು ವೀಕ್ಷಿಸಬಹುದಾಗಿದೆ.
ಸ್ಕ್ಯಾನಿಂಗ್ ಮತ್ತು ಮರು ಮೌಲ್ಯಮಾಪನ ವಿವರ
ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಪಡೆಯಲು ಇಂದಿನಿಂದ ೨೭ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದವರಿಗೆ ಉತ್ತರ ಪತ್ರಿಕೆಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಏ. ೨೬ ರಿಂದ ಮೇ ೨ ರವರೆಗೂ ಅವಕಾಶ ಇರುತ್ತದೆ. ಮೇ ೩ರಿಂದ ಸ್ಕ್ಯಾನಿಂಗ್ ಪ್ರತಿಯನ್ನು ತೆಗೆದುಕೊಂಡಿರುವವರು ಮರು ಮೌಲ್ಯಮಾಪನಕ್ಕೆ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಮೇ ೮ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕಡೆಯ ದಿನ.
ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ ೫೩೦ ರೂ. ಮತ್ತು ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ ೧೬೭೦ ರೂ. ಶುಲ್ಕ ನಿಗದಿಪಡಿಸಲಾಗಿದೆ. ಅಂಕಗಳ ಮರು ಎಣಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.
ಮರುಮೌಲ್ಯಮಾಪನ ಮತ್ತು ಮರು ಎಣಿಕೆಯ ಫಲಿತಾಂಶವನ್ನು ಪದವಿ ಪೂರ್ವ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಮೇ-ಜೂನ್‌ನಲ್ಲಿ ಪೂರಕ ಪರೀಕ್ಷೆ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೆ ಅನ್ನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ ಅಥವಾ ಜೂನ್ ತಿಂಗಳಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆಗಳಿದ್ದು, ಪೂರಕ ಪರೀಕ್ಷೆಗಳ ವೇಳಾ ಪಟ್ಟಿಯನ್ನು ಈ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಲಾಗುತ್ತದೆ.
ಅನ್ನುತ್ತೀರ್ಣರಾದ ವಿದ್ಯಾರ್ಥಿಗಳು ಇಂದಿನಿಂದಲೇ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದಾಗಿದ್ದು, ದಂಡರಹಿತವಾಗಿ ಏ. ೧೬ರವರೆಗೂ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು.
ಮೇ ೨ ದಂಡಸಹಿತವಾಗಿ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಕಡೆಯ ದಿನವಾಗಿದೆ.