ಪಿಯುಸಿ ಕಲಾ, ವಾಣಿಜ್ಯ ವಿಭಾಗಕ್ಕೆ ಆಂತರಿಕ ಅಂಕ ಬೇಡ: ಎಐಡಿಎಸ್‍ಓ

ಕಲಬುರಗಿ,ಜು.13- ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಆಂತರಿಕ ಅಂಕ ಪರಿಗಣಿಸುವ ಸರ್ಕಾರದ ನಿರ್ಧಾರದ ಬಗ್ಗೆ ಎಐಡಿಎಸ್‍ಓ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಅವರ ಆಂತರಿಕ ಅಂಕ ಪರಿಗಣಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದಿಂದ ವಿದ್ಯಾರ್ಥಿಗಳು ಎದುರಿಸಬಹುದಾದ ಸಮಸ್ಯೆಗಳ ಕಾರಣವಾಗಲಿದ್ದು, ಇದನ್ನು ಕೈಬಿಡುವಂತೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮತ್ತು ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್ ಕೆ ಅವರು ಒತ್ತಾಯಿಸಿದ್ದಾರೆ.
ಯಾವುದೇ ಹೊಸ ನಿರ್ಧಾರವನ್ನು ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ತೆಗೆದುಕೊಳ್ಳಬೇಕು ಮತ್ತು ಪರೀಕ್ಷೆಯ ರೂಪುರೇಷೆಯನ್ನು ಶಿಕ್ಷಣ ತಜ್ಞರನ್ನು ಒಳಗೊಂಡು ಪ್ರಜಾತಾಂತ್ರಿಕ ಪ್ರಕ್ರಿಯೆಯ ಮೂಲಕ ರೂಪಿಸಬೇಕು. ಆದರೆ ಪ್ರಸ್ತುತ ನಿರ್ಧಾರವು ಶೈಕ್ಷಣಿಕ ವರ್ಷ ಆರಂಭಗೊಂಡ ಬಳಿಕ ಬಂದಿದೆ ಹಾಗೂ ಯಾವುದೇ ಚರ್ಚೆಗಳು ಇಲ್ಲದೆ, ಅಪ್ರಜಾತಾಂತ್ರಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ.
ಸದಾ ಕಾಲ ಪಿಯು ವಿದ್ಯಾರ್ಥಿಗಳು ಪರೀಕ್ಷೆ ಒತ್ತಡದಲ್ಲಿ ಇರುತ್ತಾರೆ, ಈ ಆಂತರಿಕ ಅಂಕ ಎನ್ನುವುದು ಅವರಲ್ಲಿ ಅನಗತ್ಯ ಒತ್ತಡವನ್ನು ಹೇರುತ್ತದೆಯೆ ವಿನಃ ಅವರನ್ನು ಒತ್ತಡ ಮುಕ್ತರನ್ನಾಗಿ ಮಾಡುವುದಿಲ್ಲ. ಶಿಕ್ಷಣದಲ್ಲಿ ಯಾವುದೇ ನೀತಿಗಳನ್ನು ತರುವ ಉದ್ದೇಶವು, ವಿದ್ಯಾರ್ಥಿಗಳಲ್ಲಿ ಜ್ಞಾನ, ವ್ಯಕ್ತಿತ್ವ ಬೆಳೆಸಲು ಅನುವು ಮಾಡಿಕೊಡಬೇಕು. ಆದರೆ ಆಂತರಿಕ ಅಂಕ ಎಂಬ ಪ್ರಕ್ರಿಯೆಯು ಇದಕ್ಕೆ ಒತ್ತು ನೀಡದೆ,
ಅಂಕ ಗಳಿಸಿ, ಉತ್ತೀರ್ಣ ಹೊಂದುವುದನ್ನೇ ಶಿಕ್ಷಣದ ಧ್ಯೇಯವನ್ನಾಗಿಸುತ್ತದೆ. ಕಡೆಯದಾಗಿ, ವಿಜ್ಞಾನ ವಿಭಾಗದಲ್ಲಿ ಪ್ರಾಯೋಗಿಕ ವಿಷಯಕ್ಕೆ ಪರೀಕ್ಷೆಯ ಅಗತ್ಯವಿದ್ದು ಅದಕ್ಕೆ 30 ಅಂಕಗಳನ್ನು ನಿಗದಿ ಪಡಿಸಿರುವ ಹಾಗೆ, ಪ್ರಾಯೋಗಿಕ ವಿಷಗಳು ಇಲ್ಲದ ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ಮಾಡುವ ಅಗತ್ಯವಿಲ್ಲ. ಹಾಗೆ ಮಾಡುವುದರಿಂದ ವಿದ್ಯಾರ್ಥಿಗಳ 20 ಅಂಕಗಳು ಶಿಕ್ಷಕರ ಹಿಡಿತಕ್ಕೆ ಬರುತ್ತದೆ ಮತ್ತು ಅದು ಒಳ್ಳೆಯ ಸಂಕೇತವಲ್ಲ.
ಶಿಕ್ಷಣದ ವ್ಯಾಪಾರೀಕರಣ ಉದ್ದೇಶ ಹೊಂದಿರುವ ಖಾಸಗಿ ಕಾಲೇಜುಗಳು ಇದನ್ನು ದುರುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳನ್ನು ಕಿರುಕುಳಕ್ಕೆ ಒಳಪಡಿಸುವುದು ಖಚಿತ.
ಈ ಕೂಡಲೇ ರಾಜ್ಯ ಸರ್ಕಾರ ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಆಂತರಿಕ ಅಂಕ ಪರಿಗಣಿಸುವ ನಿರ್ಧಾರವನ್ನು ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.