ಪಿತೂರಿ ಬಹಿರಂಗಕ್ಕೆ ಸಿದ್ದುಗೆ ಸಿ.ಟಿ.ರವಿ ಆಗ್ರಹ

ಬೆಂಗಳೂರು, ಡಿ. ೨೦- ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಯಾರು ಷಡ್ಯಂತ್ರ ನಡೆಸಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಬಹಿರಂಗಗೊಳಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಯಾವಾಗಲೂ ಧಮ್, ತಾಕತ್ತು ಬಗ್ಗೆ ಮಾತನಾಡುತ್ತಾರೆ. ಈಗ ಅವರಿಗೆ ಧಮ್ ಇದ್ದರೆ ಅವರ ಶತ್ರು ಯಾರು, ಅವರ ವಿರುದ್ಧ ಯಾರು ಷಡ್ಯಂತ್ರ ನಡೆಸಿದ್ದಾರೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಆಗಾಗ್ಗೆ ಸತ್ಯ ಹೇಳುತ್ತಾರೆ. ಅದರಂತೆ ಈಗಲೂ ಸತ್ಯ ಹೇಳಲಿ ಎಂದು ಸಿ.ಟಿ. ರವಿ ಹೇಳಿದರು.
ಬಿಜೆಪಿಗೆ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವೇ ಶತ್ರು. ಹಾಗಾಗಿ ಆ ಪಕ್ಷವನ್ನು ಎದುರಿಸಲು ಆಗಾಗ್ಗೆ ತಂತ್ರ ರೂಪಿಸಿದ್ದೇವೆ. ಸಮಯ ಸಂದರ್ಭ ನೋಡಿಕೊಂಡು ತಂತ್ರಗಳು ಬದಲಾಗುತ್ತವೆ ಎಂದರು.
ಕೇಂದ್ರದ ಕೃಷಿ ಕಾಯ್ದೆಗಳು ರೈತ ಪರವಾಗಿದ್ದರೂ ಕಾಂಗ್ರೆಸ್ ರೈತರನ್ನು ದಿಕ್ಕು ತಪ್ಪಿಸಿ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದರು.
ರೈತರನ್ನು ದಳ್ಳಾಳಿಗಳ ಮುಷ್ಠಿಯಿಂದ ಪಾರು ಮಾಡಲು ಕೇಂದ್ರ ಸರ್ಕಾರ ಕಾಯ್ದೆ ತಂದಿದೆ. ಕಾಂಗ್ರೆಸ್ ದಳ್ಳಾಳಿಗಳ ಪರ ಇರುವುದರಿಂದ ಇಂದು ರೈತ ಪರವಾದ ಕಾಯ್ದೆಗಳನ್ನು ಬೆಂಬಲಿಸಲ್ಲ. ಕಾಂಗ್ರೆಸ್ ನೀತಿ ದಲ್ಲಾಳಿಗಳ ಪರವಾದ ನೀತಿ ಎಂದು ಟೀಕಿಸಿದರು.