ಪಿಣರಾಯಿ ವಿರುದ್ಧ ವಿಪಕ್ಷ ನಾಯಕ ಸತೀಸನ್ ವಾಗ್ದಾಳಿ

ಕೋಝಿಕ್ಕೋಡ್, ಮಾ. ೬- ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ’ಧೋತಿಯಲ್ಲಿರುವ ಮೋದಿ’ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ ಎಂದು ಕೇರಳ ವಿಧಾನಸಭೆಯ ಪ್ರತಿಪಕ್ಷದ ನಾಯಕ ವಿಡಿ ಸತೀಸನ್ ನೇರ ವಾಗ್ದಾಳಿ ನಡೆಸಿದ್ಧಾರೆ.
ಖಾಸಗಿ ಸುದ್ದಿ ವಾಹಿನಿ ಕಚೇರಿಯ ಮೇಲೆ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ಸೇಡಿನ ರಾಜಕಾರಣ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರೂ ಒಂದೇ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಶಾಸಕ ಪಿವಿ ಅನ್ವರ್ ನೀಡಿದ ದೂರಿನ ಆಧಾರದ ಮೇಲೆ ವಾಹಿನಿ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ. ಇದೊಂದು ಕೆಟ್ಟ ಸಂಪ್ರದಾಯ.ಬಿಬಿಸಿ ಕಚೇರಿಯ ಮೇಲೆ ಪ್ರಧಾನಿ ನರೇಂದ್ರ ಮೋದಿ ದಾಳಿ ನಡೆಸಿದ್ದಾರೆ. ಕೇರಳಲ್ಲಿ ಮುಖ್ಯಮಂತ್ರಿ ಖಾಸಗೀ ವಾಹಿನ ಮೇಲೆ ದಾಳಿ ನಡೆಸಿದ್ಧಾರೆ. ಇಬ್ಬರದ್ದೂ ಅಸಹಿಷ್ಣುತೆಯ ಸ್ಪಷ್ಟ ಸಂಕೇತವಾಗಿದೆ. ಟೀಕಾಕಾರನ್ನು ಎದುರಿಸದೇ ದಾಳಿ ಮಾಡಲಾಗಿದೆ ಎಂದು ತಿಳಿಸಿದ್ಧಾರೆ.

ರಾಜ್ಯದಲ್ಲಿ ’ಮಾದಕ ವಸ್ತು ಕೊಳಕು ವ್ಯವಹಾರ’ ಎಂಬ ಶೀರ್ಷಿಕೆಯ ವರದಿಯನ್ನು ಖಾಸಗೀ ವಾಹಿನಿ ಬಿತ್ತರಿಸಿತ್ತು. ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎನ್ನುವ ಕಾರಣಕ್ಕೆ ವಾಹಿನಿ ಮೇಲೆ ದಾಳಿ ಮಾಡಲಾಗಿದೆ ಎಂದು ದೂರಿದ್ದಾರೆ.
ವಾಹಿನಿಯ ನಾಲ್ವರನ್ನು ಆರೋಪಿಗಳನ್ನಾಗಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಎಸ್‌ಎಫ್‌ಐ ಕಾರ್ಯಕರ್ತರು ಕೊಚ್ಚಿಯಲ್ಲಿರುವ ವಾಹಿನಿ ಕಚೇರಿಗೆ ನುಗ್ಗಿದ್ದರು. ಅಪರಾಧ ವಿಭಾಗದ ಸಹಾಯಕ ಕಮಿಷನರ್ ವಿ.ಸುರೇಶ್ ಮತ್ತು ಏಳು ಮಂದಿ ಪೊಲೀಸರಿಂದ ಇಂದು ನಡೆದ ದಾಳಿ ಘಟನೆಗಳ ಮುಂದುವರಿದ ಭಾಗವಾಗಿದೆ ಎಂದು ಹೇಳಿದ್ದಾರೆ

ಪೋಕ್ಸೊ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ನಡುವೆ ಸುದ್ದಿ ವಾಹಿನಿಯ ಕಾರ್ಯನಿರ್ವಾಹಕ ಸಂಪಾದಕಿ ಸಿಂಧು ಸೂರ್ಯಕುಮಾರ್ ,ವಾಹಿನಿ “ನಿರ್ಭಯ ಮತ್ತು ನ್ಯಾಯಯುತ ಪತ್ರಿಕೋದ್ಯಮವನ್ನು ನಿರ್ಭಯವಾಗಿ ಮಾಡುತ್ತದೆ” ತನಿಖೆ ಪ್ರಕ್ರಿಯೆಯೊಂದಿಗೆ ಸಹಕರಿಸುತ್ತದೆ ಎಂದು ಹೇಳಿದ್ದಾರೆ.
ಸರ್ಕಾರ ಅಧಿಕಾರ ಬಳಸಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ.ಆಡಳಿತ ಶಾಸಕರೊಬ್ಬರ ದೂರಿನ ಮೇಲಿನ ಕ್ರಮದ ವೇಗವನ್ನು ನಿರ್ದಿಷ್ಟವಾಗಿ ಹೇಳಬೇಕಾಗಿದೆ ಎಂದಿದ್ದಾರೆ.