ಪಿಡಿಓ ಮೈನುದ್ದೀನ್ ವಿರುದ್ಧ ಕ್ರಮ ಕೈಗೊಳ್ಳುವಂತೆ- ರಾಘವೇಂದ್ರ ಒತ್ತಾಯ

ಮಾನ್ವಿ.ಸೆ.೨೪-ತಾಲೂಕಿನ ಕಪಗಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೈನುದ್ದಿನ್ ಕೇಂದ್ರಸ್ಥಾನದಲ್ಲಿ ಇರದೆ ಪರಸ್ಥಳದಲ್ಲಿ ಕುಳಿತು ತಮಗೆ ಮನಬಂದಂತೆ ಕೆಲಸ ನಿರ್ವಹಿಸುತ್ತಿರುವ ಇವರ ವಿರುದ್ಧ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖಂಡ ರಾಘವೇಂದ್ರ ಮನವಿ ಮೂಲಕ ಒತ್ತಾಯಿಸಿದರು.
ತಾಲೂಕಿನ ಕಪಗಲ್ ಗ್ರಾಮ ಪಂಚಾಯತಿಗೆ ಮೈನುದ್ದೀನ್ ಎಂಬ ಅಭಿವೃದ್ಧಿ ಅಧಿಕಾರಿಗಳು ತಾವೊಬ್ಬ ಸಾರ್ವಜನಿಕ ಅಧಿಕಾರಿ ಎಂಬುದನ್ನು ಮರೆತುಬಿಟ್ಟು ತಾವು ತಮ್ಮ ಮನಬಂದಂತೆ ವರ್ತನೆ ಮಾಡುತ್ತಾರೆ, ಅಲ್ಲದೇ ಗ್ರಾಮ ಪಂಚಾಯತಿಗೆ ದಿನಂಪ್ರತಿ ಹಾಜರಾಗುವುದಿಲ್ಲ.
ರಾಯಚೂರಿನಲ್ಲಿಯೇ ಕುಳಿತುಕೊಂಡು, ತಾವಿದ್ದ ಸ್ಥಳದಲ್ಲಿಯೇ ಕಂಪ್ಯೂಟರ್ ಆಪರೇಟರ್‌ರನ್ನು ಕರೆಸಿಕೊಂಡು ಅಲ್ಲಿಯೇ ಕೆಲಸ ಕಾರ್ಯಗಳನ್ನು ತಮ್ಮ ಮನ ಬಂದಂತೆ ಮಾಡುತ್ತಿದ್ದಾರೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಸಾರ್ವಜನಿಕರು, ತಮ್ಮ ಮೂಲಭೂತ ಸೌಕರ್ಯಕ್ಕಾಗಿ ಸಂಬಂಧಿಸಿದಂತೆ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಬೇಕಾದರೆ, ಅಭಿವೃದ್ಧಿ ಅಧಿಕಾರಿಗಳು ತಮ್ಮ ಫೋನ್‌ನ್ನು ಕಾಲ್ ಮಾಡಿದಾಗ ರಿಸೀವ್ ಮಾಡದೆ. ಕೇವಲ ವಾಟ್ಸಾಪ್ ಕಾಲ್ ಮೂಲಕ ಅದು ತಮಗೆ ಬೇಕಿದ್ದ ಫೋನ್ ಕಾಲ್‌ಗಳನ್ನು ಮಾತ್ರ ರಿಸೀವ್ ಮಾಡಿ ಮಾತನಾಡುತ್ತಾರೆ.
ಆದರೆ ಹಳ್ಳಿಗಳಲ್ಲಿನ ಜನರಲ್ಲಿ ದೊಡ್ಡ ಫೋನ್ ಇಲ್ಲದೇ ಇದ್ದವರಿಗೆ ಅಭಿವೃದ್ಧಿ ಅಧಿಕಾರಿಗಳು ಸಿಗುವುದಿಲ್ಲ. ಅಲ್ಲದೇ ತಾವು ಒಬ್ಬ ಸಾರ್ವನಿಕ ಅಧಿಕಾರಿ ಎಂಬುದನ್ನು ಮರೆತು ಬೇಕಾ ಬಿಟ್ಟಿ ಎಂಬಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆದ್ದರಿಂದ ತಾವುಗಳು ಸದರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೈನುದ್ದೀನ್ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಕೇಂದ್ರ ಸ್ಥಾನದಲ್ಲಿಯೇ ಇದ್ದು ಕರ್ತವ್ಯ ನಿರ್ವಹಿಸುವಂತೆ ಅವರಿಗೆ ನಿರ್ದೇಶಿಸಬೇಕು. ಒಂದು ವೇಳೆ ತಾವುಗಳು ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದೇ
ಹೋದರೆ ಗ್ರಾಮಸ್ಥರೊಂದಿಗೆ ಗ್ರಾಮ ಪಂಚಾಯತಿಯ ಮುಂದೆ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಧರಣಿ ಮಾಡಲಾಗುತ್ತದೆ ಎಂದು ಮನವಿ ಮೂಲಕ ಎಚ್ಚರಿಸಿದರು.