ಪಿಡಿಓ ಕಲ್ಲಪ್ಪ ವರ್ಗಾವಣೆಗೆ ವಿರೋಧಿಸಿ ಪ್ರತಿಭಟನೆ

ವಾಡಿ:ನ.18:ಮನರೇಗಾದಲ್ಲಿ ಕೆಲಸ ಮಾಡಿದ 300 ಜನ ಕೂಲಿ ಕಾರ್ಮಿಕರ ಬಾಕಿ ವೇತನಕ್ಕೆ ಹಾಗೂ ದಕ್ಷ
ಅಧಿಕಾರಿ ನಾಲವಾರ ಪಂಚಾಯಿತಿ ಪಿ.ಡಿ.ಓ ಕಲ್ಲಪ್ಪ ಕುಂಬಾರ ಅವರನ್ನು ಕಾರಣ ಇಲ್ಲದೆ
ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ನಾಲವಾರ ಗ್ರಾಮ
ಘಟಕ ವತಿಯಿಂದ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಯಿತು.
ಕಳೆದ ವರ್ಷ ಗ್ರೇಡ್-2 ರಾಚಯ್ಯಾಸ್ವಾಮಿ ಅವರು ಪಿಡಿಓ ಇದ್ದ ಅವುಧಿಯಲ್ಲಿ
ಮನರೇಗಾದಲ್ಲಿ ಕೆಲಸ ಮಾಡಿದ ಸುಮಾರು 300 ಜನ ಕೂಲಿ ಕಾರ್ಮಿಕರ ಎನ್.ಎಮ್.ಆರ್. ಶೂನ್ಯ
ಮಾಡಲಾಗಿದೆ. ಇದರಿಂದ ಕಾರ್ಮಿಕರು ಕೆಲಸ ಮಾಡಿದ ಬಾಕಿ ವೇತನ ಬಿಡುಗಡೆ ಮಾಡುವಂತೆ ಹಲವು
ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆದರೂ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ
ಎಂದು ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶೂನ್ಯವಾದ ಕಾರ್ಮಿಕರ ಬಾಕಿ ವೇತನ ಪಾವತಿ ಮಾಡುವ ಸಲುವಾಗಿ ಪಂಚಾಯಿತಿ ಅಭಿವೃದ್ಧಿ
ಅಧಿಕಾರಿ ಕಲ್ಲಪ್ಪ ಕುಂಬಾರ ಮುಂದಾದರೆ ಪಂಚಾಯಿತಿ ಅಧ್ಯಕ್ಷರ ಪತಿ ಅಸ್ತಾಕ್ಷೇಪ ಮಾಡಿ
ಕಾರ್ಮಿಕರ ಬಾಕಿ ವೇತನ ಪಾವತಿ ಮಾಡದಂತೆ ರಾಜಕೀಯ ಒತ್ತಡ ಹಾಕುತ್ತಿದ್ದಾರೆ.
ಪ್ರತಿಯೊಂದಕ್ಕೆ ಅಧ್ಯಕ್ಷರ ಪತಿ ವೈಯಕ್ತಿಕ ದ್ವೇಷ ಹಗೆತನ ಸಾದಿಸುತ್ತಿದ್ದಾರೆ ಎಂದು
ಸಿದ್ದಮ್ಮ ಮುತ್ತಿಗಿ ಆರೋಪಿಸಿದರು.
ನಾಲವಾರ ಗ್ರಾಮ ಪಂಚಾಯಿತಿಗೆ ಕಳೆದ ವರ್ಷ ಕಲ್ಲಪ್ಪ ಕುಂಬಾರ ಅವರನ್ನು ಅಭಿವೃದ್ಧಿ
ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಆದರೆ ಕಾರಣ ಇಲ್ಲದೆ ಏಕಾಏಕಿ ಅವರನ್ನು ಬೇರೆಡೆಗೆ
ವರ್ಗಾವಣೆ ಮಾಡಿ, ಮೊದಲಿದ್ದ ಗ್ರೇಡ್-2 ಪಿಡಿಓ ರಾಚಯ್ಯಾಸ್ವಾಮಿ ಅವರನ್ನೇ ಪುನಾ
ನಿಯೋಜಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಲ್ಲಪ್ಪ ಕುಂಬಾರ ಪಿಡಿಓ ಅವರು ದಕ್ಷ ಪ್ರಾಮಾಣಿಕತೆಯಿಂದ
ಕಾರ್ಯನಿರ್ವಾಹಿಸುತ್ತಿದ್ದಾರೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ
ನೋಡಿಕೊಳ್ಳುತ್ತಿದ್ದಾರೆ. ಇದರಿಂದ ವರ್ಗಾವಣೆ ಆದೇಶ ಹಿಂಪಡೆದು ಅವರನ್ನೇ
ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೆಲಸ ಇಲ್ಲದೆ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಬೆಂಗಳೂರು, ಮುಂಬಯಿ, ಸೇರಿದಂತೆ
ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಇದರಿಂದ ನಗರಕ್ಕೆ ಮನರೇಗಾ ಕೆಲಸ ವಿಸ್ತರಿಸಿ
ಕಾರ್ಮಿಕರಿಗೆ ಉದ್ಯೋಗ ನೀಡಬೇಕು. ಎಂದು ಪ್ರತಿಭಟನೆ ನೇತೃತ್ವ ವಹಿಸಿದ ಕರ್ನಾಟಕ
ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಸಾಯಬಣ್ಣಾ ಗುಡುಬಾ ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ನರೇಗಾ ತಾಲ್ಲೂಕು ಸಹಾಯಕ ನಿರ್ದೇಶಕ ಪಂಡಿತ ಸಿಂದೆ ಭೇಟಿ ನೀಡಿ
ಮನರೇಗಾದಲ್ಲಿ ಕೆಲಸ ಮಾಡಿದ 300 ಜನ ಕೂಲಿ ಕಾರ್ಮಿಕರ ಬಾಕಿ ವೇತನ ಪಾವತಿ
ಮಾಡಲಾಗುವುದು. ಪಿಡಿಓ ಕಲ್ಲಪ್ಪ ಕುಂಬಾರ ಅವರನ್ನೇ ಮುಂದುವರಿಸಲಾಗುವುದು ಎಂದು ಭರವಸೆ
ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಮೊನೇಶ ಮಳಬಾ,
ಸದಸ್ಯರಾದ ಸಾಬಮ್ಮ ಎಮ್.ಕಾಳಗಿ, ಗಿಡ್ಡಮ್ಮ ಪವಾರ್, ತೊಟಮ್ಮ, ಕವಿತಾ ಸುಗ್ಗಾ, ಹಣಮಂತ
ಮಳಬಾ ಭಾಗವಹಿಸಿದ್ದರು.