ಪಿಡಿಒ ನಿರ್ಲಕ್ಷ್ಯ: ಕೆಟ್ಟು ನಿಂತ ಘಟಕ

ಗಬ್ಬೂರು,ಏ.೨೮- ಗ್ರಾಮೀಣ ಪ್ರದೇಶಗಳಲ್ಲಿ ಅಶುದ್ಧ ಹಾಗೂ ಫ್ಲೋರೈಡ್ ಯುಕ್ತ ನೀರು ಕುಡಿದು ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದ್ದ ಹಿನ್ನಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಈ ಮೂಲಕ ಜನರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಒದಗಿಸುವ ಸರಕಾರದ ಯೋಜನೆ ಸಾಕಷ್ಟು ಅನುಕೂಲ ಕಲ್ಪಿಸಿದೆ.
ಆದರೆ ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮ ಪಂಚಾಯತ್ ಲೇಡಿ ಪಿಡಿಒ ಶ್ರೀಮತಿ ರೇಣುಕಾ ಅವರ ದಿವ್ಯ ನಿರ್ಲಕ್ಷ್ಯದಿಂದ ಆ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಪರಿಣಾಮ ಬಹುತೇಕ ಕಡೆಗಳಲ್ಲಿ ನೆಪಕ್ಕೆ ಮಾತ್ರ ಎನ್ನುವಂತಾಗಿದೆ.
ಮಲದಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು ೫-೬ ನೀರಿನ ಘಟಕಗಳಿದ್ದು,ಅದರಲ್ಲಿ ಒಂದೆರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ.ಉಳಿದಂತೆ ಬಹುತೇಕ ಘಟಕಗಳು ಹೆಸರಿಗೆ ಮಾತ್ರ ಇದ್ದು ಜನರಿಗೆ ಉಪಯೋಗವಿಲ್ಲದಂತಾಗಿದೆ.
ಗ್ರಾಮೀಣರಿಗೆ ಶುದ್ಧ ನೀರು ಮರೀಚಿಕೆ: ಗ್ರಾಮೀಣ ಜನರಿಗೆ ಶುದ್ಧ ನೀರು ಮತ್ತೇ ಮರೀಚಿಕೆಯಾಗಿದ್ದು,ಘಟಕಗಳು ಮತ್ತೆ ಕೆಟ್ಟು ನಿಂತು ಹೋಗಿವೆ.ಒಟ್ಟಿನಲ್ಲಿ ಎನ್.ಗಣೇಕಲ್ ಗ್ರಾಮದಲ್ಲಿ ಹೆಸರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕ ಎನ್ನುವಂತಾಗಿದ್ದು,ಜನರಿಗೆ ಇದರ ಉಪಯೋಗವಾಗುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಎನ್.ಗಣೇಕಲ್ ಗ್ರಾಮಸ್ಥರಾದ ತುಕರಾಮ, ನರಸಪ್ಪ, ಬಸವಲಿಂಗಪ್ಪ ಒತ್ತಾಯಿಸಿದ್ದಾರೆ.