ಪಿಡಿಒಗಳ ವಿರುದ್ಧ ಸಚಿವ ಪ್ರಭು ಚವ್ಹಾಣ್ ಫುಲ್ ಗರಂ

ಔರಾದ್:ಮೇ.18: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪರಿಣಾಮ ಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅತೃಪ್ತಿ ವ್ಯಕ್ತಪಡಿಸಿದರು.

ಇಲ್ಲಿಯ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ತಾಲ್ಲೂಕಿನ ವಿವಿಧ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗಳ ಜತೆ ವಿಡಿಯೊ ಸಂವಾದ ನಡೆಸಿ ಕೋವಿಡ್ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಪ್ರತಿ ಗ್ರಾಮದಲ್ಲಿ ನಿತ್ಯ ಎಷ್ಟು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ತಡೆಯಲು ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದರ ಕುರಿತು ಪಿಡಿಒಗಳಿಂದ ಮಾಹಿತಿ ಪಡೆದರು. ಕೆಲವರಿಂದ ಸಮರ್ಪಕ ಮಾಹಿತಿ ಸಿಗದ ಕಾರಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕೋವಿಡ್ ನಿರ್ವಹಣೆಯಲ್ಲಿ ಲೋಪ ಆದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಪಿಡಿಒಗಳು ನಿತ್ಯ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿಯಿಂದ ಕೆಲಸ ಮಾಡಿಸಬೇಕು. ಪ್ರತಿ ಗ್ರಾಮಕ್ಕೆ ಭೇಟಿ ಕೊಟ್ಟು ಕೋವಿಡ್ ಕುರಿತು ಮಾಹಿತಿ ಕಲೆ ಹಾಕಬೇಕು. ಮಾಸ್ಕ್ ಇಲ್ಲದೆ ಯಾರೂ ಹೊರ ಬಾರದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದ ಕಡೆ ಜನ ಸೇರಿದರೂ ಅಲ್ಲಿ ಅಂತರ ಕಾಯ್ದುಕೊಳ್ಳುವ ಕೆಲಸ ಆಗಬೇಕು. ಪ್ರತಿ ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಸದ್ಯದ ಕೋವಿಡ್ ಅಲೆ ನಿರ್ವಹಣೆ ಹಾಗೂ ಮುಂದೆ ಬರುವ 3ನೇ ಅಲೆ ಎದುರಿಸಲು ಅಧಿಕಾರಿಗಳು ಸಿದ್ಧರಾಗಬೇಕು. ಪಿಡಿಒಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಮಾಡಬೇಕು. ದಿನದ 24 ಗಂಟೆ ಮೊಬೈಲ್ ಚಾಲನೆಯಲ್ಲಿ ಇಡಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿ ಗ್ರಾಮ ಸೋಂಕಿನಿಂದ ಮುಕ್ತವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್ ಮಾತನಾಡಿ, ಕೊರೊನಾ ಸೋಂಕು ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸಿದೆ. ಈ ಕಾರಣ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪಿಡಿಒಗಳು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಹಿತಿ ಇಒ ಮಾಣಿಕರಾವ ಪಾಟೀಲ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಇದ್ದರು.