ಪಿಡಿಒಗಳಿಗೆ ಇ-ಹಾಜರಾತಿ ಕಡ್ಡಾಯ: ಡಿಜಿಟಲೀಕರಣಕ್ಕೆ ಆದ್ಯತೆ ನೀಡಿ: ಸಿಇಒ ಸದಾಶಿವ ಪ್ರಭು


ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ.3: ಗ್ರಾಮ ಪಂಚಾಯಿತಿ ತಂತ್ರಾಂಶ ಪಂಚತಂತ್ರ 2.030 ಇ-ಹಾಜರಾತಿ ವ್ಯವಸ್ಥೆ ಇದ್ದು, ಪ್ರತಿ ದಿನ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇ-ಹಾಜರಾತಿ ದಾಖಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸದಾಶಿವ ಪ್ರಭು ಬಿ. ಸೂಚನೆ ನೀಡಿದರು. 
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸದಾಶಿವ ಪ್ರಭು ಬಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಈ ಹಾಜರಾತಿ ಮೇಲ್ವಿಚಾರಣೆ ದಾಖಲೆ ಮಾನಿಟರಿಂಗ್ ಮಾಡಲು ಜಿಲ್ಲಾ ಪಂಚಾಯಿತಿಯಲ್ಲಿ ಅವಕಾಶವಿದ್ದು, ಒಂದು ವೇಳೆ ಪ್ರತಿದಿನ ಕಡ್ಡಾಯವಾಗಿ ದಾಖಲಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಸಭೆಯ ಆರಂಭದಲ್ಲಿ ಗೃಹಲಕ್ಷ್ಮಿ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದ್ದಕ್ಕೆ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ಕುಡಿಯುವ ನೀರು ನೈರ್ಮಲ್ಯದ ಬಗ್ಗೆ ಹೆಚ್ಚು ಒತ್ತುಕೊಟ್ಟು ಪರಿಶೀಲನೆ ನಡೆಸಿದ ಸಿ.ಇ.ಒ ಅವರು, ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಶೌಚಾಲಯ ಬಳಸುವಂತೆ ಜಾಗೃತಿ ಮೂಡಿಸಬೇಕಿದೆ. ನಿಟ್ಟಿನಲ್ಲಿ ಗ್ರಾ.ಪಂ. ಸಿಬ್ಬಂದಿಗಳು ಶೌಚಾಲಯಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಬೇಕು, ಗ್ರಾ.ಪಂ. ಸಿಬ್ಬಂದಿಗಳು ಶೌಚಾಲಯಗಳನ್ನು ಬಳಸದಿರುವ ಮಾಹಿತಿ ಸಿಕ್ಕರೆ ಅಂತಹವರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಗ್ರಾ.ಪಂ ಸಿಬ್ಬಂದಿಗಳಿಂದ, ಸ್ವಸಹಾಯ ಸಂಘದ ಸದಸ್ಯರಿಂದ, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ, ಅಂಗನವಾಡಿ, ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಂಪೂರ್ಣ ಸಮನ್ವಯ ಸಾಧಿಸಿಕೊಂಡು ಜಿಲ್ಲೆಯ ಎಲ್ಲಾ ಗ್ರಾಮಗಳನ್ನು ಬಯಲು ಮುಕ್ತ ಶೌಚಾಲಯ ಗ್ರಾಮಗಳನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.
ಸಾರ್ವಜನಿಕರಿಂದ ಬರುವ ಎಲ್ಲಾ ಅರ್ಜಿಗಳನ್ನು ಬಾಪೂಜಿ ಸೇವಾ ಕೇಂದ್ರದ ಮೂಲಕ ದಾಖಲಿಸಿ ನಿಗದಿತ ಸಮಯದೊಳಗೆ ವಿಲೇವಾರಿ ಮಾಡಬೇಕೆಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.  ಎಲ್ಲಾ ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲೀಕರಣ ಸೇರಿದಂತೆ ತೆರಿಗೆಯನ್ನು ಕಡ್ಡಾಯವಾಗಿ ಪಿ.ಒ.ಎಸ್. ಮಷೀನ್ ಮೂಲಕವೇ ಸಂಗ್ರಹಿಸಬೇಕು. ಒಂದು ವೇಳೆ ತೆರಿಗೆ ಸಂಗ್ರಹಣೆಯನ್ನು ಹಳೇ ವಿಧಾನದ ಮೂಲಕ ಮಾಡುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕಸ ವಿಲೇವಾರಿ ಸೇರಿದಂತೆ ಇನ್ನೂ ಅನೇಕ ವಿಷಯಗಳ ಕುರಿತಾಗಿ ವಿವರವಾಗಿ ಪ್ರಗತಿ ಪರಿಶೀಲನಾ ಕಾರ್ಯ ಕೈಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಭೀಮಪ್ಪ ಲಾಳಿ, ಮುಖ್ಯ ಯೋಜನಾಧಿಕಾರಿ ಅನ್ನದಾನ ಸ್ವಾಮಿ, ಯೋಜನಾ ನಿರ್ದೇಶಕ ಅಶೋಕ ತೋಟದ, ಮುಖ್ಯಲೆಕ್ಕಾಧಿಕಾರಿ ಶ್ರೀನಿವಾಸ, ಸಿ.ಜಿ. ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಸಭೆಯಲ್ಲಿ ಹಾಜರಿದ್ದರು.