ಪಿಕಪ್‌ಗೆ ಕಂಟೈನರ್ ಲಾರಿ ಡಿಕ್ಕಿ ಓರ್ವ ಮೃತ್ಯು: ಮೂವರು ಗಂಭೀರ

ಸುಳ್ಯ, ಜೂ.೧೦- ಪಿಕಪ್‌ಗೆ ಕಂಟೈನರ್ ಲಾರಿ ಢಿಕ್ಕಿ ಹೊಡೆದ ಪರಿಣಾಮವಾಗಿ ಪಿಕಪ್ ನಲ್ಲಿದ್ದ ಓರ್ವ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನ ಮಾವಿನಕಟ್ಟೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.


ಪುತ್ತೂರು ಕಡೆಯಿಂದ ಸಂಪಾಜೆಗೆ ತೆರಳುತ್ತಿದ್ದ ಪಿಕಪ್ ಗೆ ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಅಡ್ಕಾರಿನ ಮಾವಿನಕಟ್ಟೆಯ ಬಳಿ ಢಿಕ್ಕಿ ಹೊಡೆದಿದ್ದು, ಪಿಕಪ್ ನಲ್ಲಿದ್ದ ಪೆರಾಜೆಯ ಪಾಲೆಗುಂಡಿಯ ದಿನಕರ (೩೨) ಎಂಬವರು ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಪಿಕಪ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಂಟೈನರ್ ಲಾರಿ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಸಂಬಂಧ ಸುಳ್ಯ ಪೋಲಿಸರು ಕೇಸು ದಾಖಲಿಸಿಕೊಂಡಿದ್ದಾರೆ.