
ಸಂಜೆವಾಣಿ ವಾರ್ತೆ
ಹರಿಹರ.ಆ.೩ : ಪರಿಸರಕ್ಕೆ ಹಾನಿ ಉಂಟು ಮಾಡುವ ಪಿಒಪಿ ಗಣೇಶ ಮೂರ್ತಿಗಳ ಮಾರಾಟವನ್ನು ನಿಷೇಧಿಸುವಂತೆ ಒತ್ತಾಯಿಸಿ ನಗರದ ಕುಂಬಾರ ಓಣಿಯ ಮಣ್ಣಿನ ಗಣೇಶ ಮೂರ್ತಿಗಳ ತಯಾರಕರು ನಗರಸಭಾ ಅಧ್ಯಕ್ಷರು ಮತ್ತು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ನಗರಸಭಾ ಕಛೇರಿಗೆ ಆಗಮಿಸಿದ ಮಣ್ಣಿನ ಗಣೇಶ ಮೂರ್ತಿಗಳ ತಯಾರಕರು ನಗರಸಭಾ ಅಧ್ಯಕ್ಷೆ ನಿಂಬಕ್ಕ ಚಂದಾಪುರ ಅವರಿಗೆ ಮನವಿ ಸಲ್ಲಿಸಿದರು. ನಂತರ ಹಿರಿಯ ಕಲಾವಿದ ಕುಂಬಾರ ಶಂಕರಪ್ಪ ಮಾತನಾಡಿ ಪಿಒಪಿ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿ ಉಂಟು ಮಾಡುವುದಲ್ಲದೆ ವರ್ಷವಿಡಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿ ಮಾಡುವ ಸ್ಥಳೀಯ ಕಲಾವಿದರಿಗೆ ಭಾರಿ ನಷ್ಟ ಉಂಟು ಮಾಡುತ್ತಿವೆ. ಕೇಂದ್ರ ಸರ್ಕಾರ ಪಿಒಪಿ ಗಣೇಶ ಮೂರ್ತಿಗಳ ನಿಷೇಧಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಪಿಒಪಿ ಗಣೇಶ ಮೂರ್ತಿಗಳ ಮಾರಾಟವಾಗುವ ಸಾಧ್ಯತೆ ಇದೆ ಎಂದರು. ಇದನ್ನು ತಡೆಗಟ್ಟಲು ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು. ಮತ್ತು ತಹಶೀಲ್ದಾರರು ಮುಂಜಾಗ್ರತವಾಗಿ ನಗರಸಭೆ ಅಧಿಕಾರಿಗಳು ಮತ್ತು ಪಿಡಿಒಗಳ ಸಭೆ ಕರೆದು ಪಿಒಪಿ ಗಣೇಶ ಮೂರ್ತಿಗಳ ನಿಷೇಧದ ಬಗ್ಗೆ ಮಾಹಿತಿ ನೀಡಿ ನಗರ ಮತ್ತು ತಮ್ಮ, ತಮ್ಮ ಗ್ರಾಮಗಳಲ್ಲಿ ಪಿಒಪಿ ಗಣಪತಿಗಳು ಯಾವುದೇ ರೀತಿ ಮಾರಾಟಕ್ಕೆ ಬರದಂತೆ ತಡೆಹಿಡಿಯಬೇಕೆಂದರು ತಾಲ್ಲೂಕಿನಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಗಣೇಶ ಮಂಡಳಿಗಳು ಪಿಒಪಿ ಗಣಪತಿಗಳಿಗೆ ಒತ್ತು ನೀಡದೆ ಸಾಂಪ್ರದಾಯಿಕ ಮಣ್ಣಿನ ಗಣಪತಿ ಮೂರ್ತಿಗಳನ್ನು ಹೆಚ್ಚು ಬಳಕೆ ಮಾಡಿ ಸಹಕರಿಸಬೇಕು. ಪೊಲೀಸರು. ನಗರಸಭೆ. ಪಿಡಿಒ ಅಧಿಕಾರಿಗಳು ಪಿಒಪಿ ಗಣಪತಿ ಮೂರ್ತಿಗಳ ಮಾರಾಟಗಾರರ ಮೇಲೆ ಶಿಸ್ತು ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿದರು.ಕಲಾವಿದ ಕುಂಬಾರ ಜಿ.ವೀರೇಶ್ ಮಾತನಾಡಿ, ಹಣದಾಸೆಗೆ ಮೂರ್ತಿಕಾರರಲ್ಲದ ಕೆಲವರು ಪಿಒಪಿ ಗಣೇಶ ಮೂರ್ತಿಗಳನ್ನು ತಂದು ನಗರ ಮತ್ತು ಹಳ್ಳಿಗಳಲ್ಲಿ ಗುಪ್ತವಾಗಿ ಇಟ್ಟು ಹಬ್ಬ ಸಮೀಪಿಸುವ ಮುನ್ನ ಗೌಪ್ಯವಾಗಿ ಮಾರಾಟ ಮಾಡುತ್ತಾ ಬಂದಿದ್ದಾರೆ. ಈ ಕುರಿತು ಅಧಿಕಾರಿಗಳು ದಿಟ್ಟ ಕ್ರಮ ಕೈಕೊಂಡು ಪಿಒಪಿ ಗಣೇಶ ಮೂರ್ತಿಗಳು ಮಾರಾಟ ಆಗದಂತೆ ತಡೆ ಹಿಡಿಯಬೇಕೆಂದು ಮನವಿ ಮಾಡಿಕೊಂಡರು. ನಂತರ ನಗರದ ತಾಲ್ಲೂಕು ಕಛೇರಿಗೆ ಆಗಮಿಸಿದ ತಹಶೀಲ್ದಾರ್ ಗುರುಬಸವರಾಜ್ ರವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ಜಿ ಸಿದ್ದೇಶ್, ಸದಸ್ಯರಾದ ಆಟೋ ಹನುಮಂತಪ್ಪ, ಮಾಜಿ ಉಪಾಧ್ಯಕ್ಷ ಎ.ವಾಮನ್‌ಮೂರ್ತಿ, ಮುಖಂಡರಾದ ಮಂಜುನಾಥ್ ಫೈನಾನ್ಸ್, ಸುರೇಶ್ ಚಂದಾಪುರ್,. ಹನುಮಂತಪ್ಪ, ಕುಂಬಾರ ಯುವ ಸೇನೆಯ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್ ಕುಂಬಾರ್, ಸಮಾಜದ ಮುಖಂಡರಾದ ಕೆ.ಈರಪ್ಪ, ಟಿ.ಕೆ.ಮಲ್ಲಿಕಾರ್ಜುನ, ಗಂಗಾಧರ .ಕೆ, ಮಾಂತೇಶ್ .ಜಿ, ಪಂಚಾಕ್ಷರಿ ಜಿ, ವೇದಮೂರ್ತಿ, ವಿಜಯ್ ಕುಮಾರ್, ಗಣೇಶ್, ಮುರುಗೇಶ್, ಮಲ್ಲಿಕಾರ್ಜುನಪ್ಪ ಟಿ, ಗೌಡ್ರ ಬಸೆಟ್ಟೆಪ್ಪ ಹಾಗೂ ಮತ್ತಿತರರಿದ್ದರು.