ಪಿಎಸ್ಸೈ ಹೆಸರಲ್ಲಿ ನಕಲಿ ಎಫ್‌ಬಿ ಖಾತೆ ತೆರೆದು ಹಣಕ್ಕೆ ಬೇಡಿಕೆ: ತನಿಖೆ ಚುರುಕು

ಬಂಟ್ವಾಳ, ಸೆ.೧೭- ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಐ ಪ್ರಸನ್ನ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು, ಅದರ ಮೂಲಕ ಚಾಟ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಖದೀಮರ ಜಾಲವೊಂದು ಪತ್ತೆಯಾಗಿದೆ. ಘಟನೆಯ ಕುರಿತು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ.

ನಕಲಿ ಖಾತೆಯನ್ನು ತೆರೆದಿರುವ ಬಗ್ಗೆ ಸ್ವತಹ ಪಿಎಸ್ಐ ಪ್ರಸನ್ನ ಅವರೇ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ. ಸ್ನೆಹಿತರೇ ನನ್ನ ಹೆಸರಿನಲ್ಲಿ ಯಾರೋ ಫೇಕ್ ಅಕೌಂಟ್ ತೆರೆದಿದ್ದಾರೆ. ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ. ದಯವಿಟ್ಟು ಅದನ್ನು ಅಕ್ಸೆಪ್ಟ್ ಮಾಡಬೇಡಿ ಮತ್ತು ಅವರಿಂದ ಮೋಸಕ್ಕೆ ಒಳಗಾಗಬೇಡಿ. ನಿಮಗೆ ಯಾವುದಾದರು ಮೆಸೇಜ್ ಕಳುಹಿಸಿದರೆ ನನ್ನ ಗಮನಕ್ಕೆ ತನ್ನಿ ಎಂದು ಪೋಸ್ಟ್ ಮೂಲಕ ಮನವಿ ಮಾಡಿದ್ದಾರೆ. ನಕಲಿ ಫೇಸ್ ಬುಕ್ ಖಾತೆಯ ಮೂಲಕ ಮೆಸೆಂಜರ್ ನಲ್ಲಿ ಪ್ರಸನ್ನ ಅವರ ಸ್ನೇಹಿತರಿಗೆ ಮೆಸೇಜ್ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಅನುಮಾನಗೊಂಡ ಸ್ನೇಹಿತರು ಪ್ರಸನ್ನ ಅವರಿಗೆ ವಿಷಯ ತಿಳಿಸಿದ್ದು, ಕೂಡಲೇ ಅವರು ಫೇಸ್ ಬುಕ್ ನ ನಕಲಿ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಿಂದ ಉತ್ತರ ಭಾರತ ಮೂಲದ ವ್ಯಕ್ತಿ ನಕಲಿ ಖಾತೆ ತೆರೆದಿರುವ ಮಾಹಿತಿ ತಿಳಿದು ಬಂದಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.