ಬೆಂಗಳೂರು, ಜೂ.೨೭-ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಿಂದ ರದ್ದಾಗಿರುವ ಅಭ್ಯರ್ಥಿಗಳಿಗೆ ಮರುಪರೀಕ್ಷೆ ವಿಚಾರದ ಬಗ್ಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಮಧ್ಯಾಹ್ನ ವಿಚಾರಣೆ ನಡೆಸಲಿದೆ.
ಮಧ್ಯಾಹ್ನದ ನಂತರ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು, ಮರುಪರೀಕ್ಷೆಯ ಬಗ್ಗೆ ಸರ್ಕಾರ ತನ್ನ ನಿರ್ಧಾರ ತಿಳಿಸಲಿದೆ. ಈ ಹಿಂದೆ ೫೧೦ ಅಭ್ಯರ್ಥಿಗಳಿಗೆ ಕಿರುಪರೀಕ್ಷೆಯ ಬಗ್ಗೆ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಲ್ಲದೇ ಈ ಬಗ್ಗೆ ಸರ್ಕಾರ ತನ್ನ ನಿರ್ಧಾರವನ್ನು ತಿಳಿಸುವಂತೆ ಕೋರ್ಟ್ ನಿರ್ದೇಶನ ನೀಡಿತ್ತು. ಸುಮಾರು ೫೦ ಸಾವಿರ ಅಭ್ಯರ್ಥಿಗಳಿಗೂ ಮರು ಪರೀಕ್ಷೆ ನಡೆಯಲಿದೆಯೇ ಅಥವಾ ೫೧೦ ಅಭ್ಯರ್ಥಿಗಳಿಗೆ ಮಾತ್ರ ಕಿರುಪರೀಕ್ಷೆ ನಡೆಯಲಿದೆಯೇ? ಇಲ್ಲವೇ ಸರ್ಕಾರದ ನಿರ್ಧಾರ ಏನಿದೆ? ನ್ಯಾಯಾಲಯ ಏನು ಆದೇಶ ನೀಡಲಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿತ್ತು. ಬಳಿಕ ತನಿಖೆಯ ವೇಳೆ ಪರೀಕ್ಷಾ ಕೇಂದ್ರಗಳನ್ನು ಬುಕ್ ಮಾಡಿಕೊಂಡು ಅಕ್ರಮ ಎಸಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಆಡಿಯೋ ಸಹ ವೈರಲ್ ಆಗಿತ್ತು. ಇದಾದ ಬಳಿಕ ಈ ನೇಮಕಾತಿಯನ್ನು ರದ್ದು ಮಾಡಲಾಗಿತ್ತು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.ಈಗಲೂ ಪ್ರಕರಣ ವಿಚಾರಣೆ ಹಂತದಲ್ಲಿದೆ.ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಸಚಿವರು ಹಾಗೂ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಅಲ್ಲದೇ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಎಸಗಿರುವ ೫೨ ಅಭ್ಯರ್ಥಿಗಳನ್ನು ಪೊಲೀಸ್ ಇಲಾಖೆ ನಡೆಸುವ ಯಾವುದೇ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಡಿಬಾರ್ ಮಾಡಿ ಇತ್ತೀಚೆಗೆ ಆದೇಶಿಸಲಾಗಿದೆ.