ಪಿಎಸ್‍ಐ ಹಗರಣ: ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ

ಕಲಬುರಗಿ,ಸೆ.3-ಇಲ್ಲಿನ ನೊಬೆಲ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಪಿ.ಎಸ್.ಐ ಪರೀಕ್ಷಾ ಅಕ್ರಮ ಕುರಿತಂತೆ ಸಿಐಡಿ ಅಧಿಕಾರಿಗಳು ಜಿಲ್ಲಾ ನ್ಯಾಯಾಲಯಕ್ಕೆ 2060 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಒಟ್ಟು 124 ಕಡತಗಳಿದ್ದು, 104 ಜನರ ಸಾಕ್ಷಿಗಳನ್ನು ಚಾರ್ಜ್ ಶೀಟ್‍ನಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಪಿಎಸ್‍ಐ ಹಗರಣದ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ: ನೊಬೆಲ್ ಶಾಲೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಅನೇಕರನ್ನು ವಿಚಾರಣೆಗೆ ಒಳಪಡಿಸಿದ ಸಿಐಡಿ ಅಧಿಕಾರಿಗಳು, ಏಳು ಜನರನ್ನು ಈಗಾಗಲೇ ಬಂಧಿಸಿದ್ದಾರೆ. ಇದೀಗ ನಿಗದಿತ ಅವಧಿಗೂ ಎಂಟು ದಿನ ಮುನ್ನವೇ ಸಿಐಡಿ ಡಿವೈಎಸ್ಪಿ ಪ್ರಕಾಶ ರಾಠೋಡ್, ಶಂಕರಗೌಡ ಪಾಟೀಲ ಹಾಗೂ ಸಿಬ್ಬಂದಿ ಜಿಲ್ಲಾ ನ್ಯಾಯಾಲಯಕ್ಕೆ 2060 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಒಟ್ಟು 124 ಕಡತಗಳಿದ್ದು, 104 ಜನರ ಸಾಕ್ಷಿಗಳನ್ನು ಇದರಲ್ಲಿ ದಾಖಲಿಸಲಾಗಿದೆ.
ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಇಲ್ಲಿವರೆಗೆ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆ, ಎಂ.ಎಸ್. ಇರಾನಿ ಕಾಲೇಜು, ನೊಬೆಲ್ ಶಾಲೆಯ ಪರೀಕ್ಷಾ ಕೇಂದ್ರ ಸೇರಿ ಒಟ್ಟು ಮೂರು ಕಡೆಗಳಲ್ಲಿ ನಡೆದ ಅಕ್ರಮ ಕುರಿತಾಗಿ ಚಾರ್ಜ್ ಶೀಟ್ ಸಲ್ಲಿಕೆಯಾದಂತಾಗಿದೆ.
ಅಕ್ರಮ ಪ್ರಕರಣದಲ್ಲಿ ಬಿಜೆಪಿ ನಾಯಕಿ ಆಗಿದ್ದ ದಿವ್ಯಾ ಹಾಗರಗಿ, ಅವರ ಪತಿ ರಾಜೇಶ್ ಹಾಗರಗಿ, ಕಿಂಗ್ ಪಿನ್ ಆರ್.ಡಿ.ಪಾಟೀಲ, ಸರ್ಕಾರಿ ಇಂಜಿನಿಯರ್ ಮಂಜುನಾಥ ಮೇಳಕುಂದಿ, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಕೆಎಸ್‍ಆರ್‍ಪಿ ಸಹಾಯಕ ಕಮಾಂಡೆಂಟ್ ವೈಜನಾಥ ರೇವೂರ ಹಾಗೂ ಅನೇಕ ಅಭ್ಯರ್ಥಿಗಳು ಜೈಲಿನಲ್ಲಿದ್ದಾರೆ.