ಪಿಎಸ್‍ಐ ಹಗರಣ: ಪರೀಕ್ಷಾ ಕೇಂದ್ರದ ಶೌಚಾಲಯದಲ್ಲಿ ಬ್ಲ್ಯೂಟೂತ್ ಡಿವೈಸ್ ಬಚ್ಚಿಟ್ಟಿದ್ದ ಅಭ್ಯರ್ಥಿ

ಕಲಬುರಗಿ,ಜು.28:ಪಿಎಸ್‍ಐ ಅಗಬೇಕು ಎಂದು ಅಕ್ರಮದ ಹಾದಿ ತುಳಿದ ಅಭ್ಯರ್ಥಿಗಳುಕ ಆಡಿದ ಆಟಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಹೂವಿನ ಕುಂಡದಲ್ಲಿ ಬ್ಲ್ಯೂಟೂತ್ ಡಿವೈಸ್ ಬಚ್ಚಿಟ್ಟು ಅಕ್ರಮ ಎಸಗಿದ್ದು, ಒಂದೆಡೆಯಾದರೆ, ಇನ್ನೊಬ್ಬ ಅಭ್ಯರ್ಥಿ ರಾತ್ರೋ ರಾತ್ರಿ ಪರೀಕ್ಷಾ ಕೇಂದ್ರಕ್ಕೆ ತೆರಲಿ ಶೌಚಾಲಯದಲ್ಲಿ ಬ್ಲ್ಯೂಟೂತ್ ಡಿವೈಸ್ ಬಚ್ಚಿಟ್ಟು ಬಂದಿದ್ದ ಎಂಬ ಆತಂಕಕಾರಿ ಸಂಗತಿ ಹೊರಬಿದ್ದಿದೆ.
ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ವಿಚಾರ ಈಗಾಗಲೇ ಜಗಜ್ಜಾಹಿರವಾಗಿದೆ. ಈ ಹಿಂದೆ ಪರೀಕ್ಷಾ ಕೇಂದ್ರದ ಹೂವಿನ ಕುಂಡದಲ್ಲಿ ಬ್ಲ್ಯೂಟೂತ್ ಅಡಗಿಸಿಟ್ಟು ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮ ಮಾಡಿದ್ದೆ ಎಂದು ಸಿಐಡಿ ಬಂಧನಕ್ಕೆ ಒಳಗಾಗಿದ್ದ ಆರೋಪಿ ಪ್ರಭು ಬಾಯಿಬಿಟ್ಟಿದ್ದ. ಇದೀಗ ನ್ಯೂ ನೋಬೆಲ್ ಶಾಲೆ ಕೇಂದ್ರದಲ್ಲಿ ಅಕ್ರಮ ಮಾಡಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವ ಇಸ್ಮಾಯಿಲ್ ಎಂಬ ಅಭ್ಯರ್ಥಿ ತಾನು ಶಾಲೆಯ ಶೌಚಾಲಯದ ಕೋಣೆಯಲ್ಲಿ ಬ್ಲ್ಯೂಟೂತ್ ಡಿವೈಎಸ್ ಬಚ್ಚಿಟ್ಟು ಅಕ್ರಮ ಎಸಗಿರುವ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.
ಹೇಗಾದರೂ ಸರಿ, ತಾನೂ ಪಿಎಸ್‍ಐ ಆಗಲೇಬೇಕು ಎಂದು ಪರೀಕ್ಷೆಗೆ ನಿಗದಿಯಾಗಿದ್ದ ನ್ಯೂ ನೋಬೆಲ್ ಶಾಲೆಗೆ ರಾತ್ರಿ ಮೂರು ಗಂಟೆ ಸುಮಾರಿಗೆ ತೆರಳಿದ ಇಸ್ಮಾಯಿಲ್, ಯಾರಿಗೂ ಗೊತ್ತಾಗದಂತೆ ಶೌಚಾಲಯ ಕೋಣೆಯಲ್ಲಿ ಡಿವೈಎಸ್ ಇಟ್ಟು ಬಂದು ಪರೀಕ್ಷೆ ವೇಳೆ ಅಕ್ರಮ ಎಸಗಿದ್ದಾನೆಂದು ಹೇಳಲಾಗುತ್ತಿದೆ.