ಪಿಎಸ್ಐ ಪರೀಕ್ಷೆ ಅಕ್ರಮ : 14 ಜನ ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

ಕಲಬುರಗಿ:ಮೇ.11: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್​, ದಿವ್ಯಾ ಹಾಗರಗಿ ಪತಿ ರಾಜೇಶ್​​ ಹಾಗರಗಿ ಸೇರಿ ಒಟ್ಟು 14 ಜನ ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಪ್ರಕರಣದ 14 ಜನ ಆರೋಪಿತರಲ್ಲಿ ಕಲಬುರಗಿಯ 3ನೇ ಹೆಚ್ಚುವರಿ ಜೆಎಂಎಫ್​ಸಿ ನ್ಯಾಯಾಲಯ 9 ಜನ ಆರೋಪಿಗಳ ಅರ್ಜಿ ವಜಾ‌ ಮಾಡಿದೆ. ವಿಶಾಲ್, ರುದ್ರಗೌಡ, ಹಯ್ಯಾಳಿ ದೇಸಾಯಿ, ಮಲ್ಲಿಕಾರ್ಜುನ ಪಾಟೀಲ್, ಮಹಾಂತೇಶ್ ಪಾಟೀಲ್, ಸುರೇಶ್ ಕಾಟೆಗಾಂವ್, ಕಾಳಿದಾಸ, ಸದ್ದಾಂ ಮತ್ತು ಶರಣಬಸಪ್ಪ ಅವರ ಜಾಮೀನು ತಿರಸ್ಕಾರ ಮಾಡಲಾಗಿದೆ.
ಕಲಬುರಗಿಯ 1ನೇ ಹೆಚ್ಚುವರಿ ಜಿಲ್ಲಾಸತ್ರ ನ್ಯಾಯಾಲಯದಲ್ಲಿ 5 ಜನ ಆರೋಪಿಗಳ ಜಾಮೀನು ಅರ್ಜಿ ವಜಾಗೊಂಡಿದೆ. ರಾಜೇಶ್ ಹಾಗರಗಿ, ಚೇತನ್, ಅರುಣ್, ಸುಮಾ ಮತ್ತು ಸಿದ್ದಮ್ಮಾ ಇವರ ಬೇಲ್ ಅರ್ಜಿ ವಜಾಗೊಳಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.