ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಿವ್ಯಾ ಹಾಗರಗಿ ಸೇರಿ 26 ಜನ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು

ಕಲಬುರಗಿ,ಜ.5-ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿ 26 ಜನ ಆರೋಪಿಗಳಿಗೆ ಜಾಮೀನು ದೊರೆತಿದೆ.
ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಬಿ.ಪಾಟೀಲ ಅವರು ದಿವ್ಯಾ ಹಾಗರಗಿ ಸೇರಿ 26 ಜನ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.
ಪಿ.ಎಸ್.ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‍ಪಿನ್ ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ, ಕಾಶಿನಾಥ ಚಿಲ್, ಡಿ.ವೈ.ಎಸ್.ಪಿ.ಮಲ್ಲಿಕಾರ್ಜುನ ಸಾಲಿ ಸೇರಿ 26 ಜನರಿಗೆ ಜಾಮೀನು ಸಿಕ್ಕಿದೆ.
ಪಿ.ಎಸ್.ಐ.ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‍ಪಿನ್ ಗಳಲ್ಲಿ ಒಬ್ಬರಾದ ದಿವ್ಯಾ ಹಾಗರಗಿ ಅವರನ್ನು ಕಳೆದ ಏಪ್ರಿಲ್ ತಿಂಗಳಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದರು. ಪ್ರಕರಣ ಬೆಳಕಿಗೆ ಬಂದ ನಂತರ ಸುಮಾರು 18 ದಿನಗಳವರೆಗೆ ತಲೆ ಮರೆಸಿಕೊಂಡಿದ್ದ ದಿವ್ಯಾ ಹಾಗರಗಿ ಅವರನ್ನು ಸಿಐಡಿ ಅಧಿಕಾರಿಗಳು ಪುಣೆಯಲ್ಲಿ ಬಂಧಿಸಿದ್ದರು. ದಿವ್ಯಾ ಹಾಗರಗಿ ಅವರ ಜ್ಞಾನಜ್ಯೋತಿ ಶಾಲೆಯಲ್ಲಿ ಅಕ್ರಮ ನಡೆದಿರುವುದನ್ನು ಸಿಐಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದರು.