ಪಿಎಸ್‌ಐ ಅಕ್ರಮ ಬಂಧಿತ ಸುಪ್ರಿಯಾಗೆ ಸಿಐಡಿ ಡ್ರಿಲ್

ಕಲಬುರಗಿ, ನ. ೩- ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಅಕ್ರಮದ ಸಂಬಂಧ ಮೊದಲ ರ್‍ಯಾಂಕ್ ಪಡೆದಿದ್ದ ಅಭ್ಯರ್ಥಿ ಸುಪ್ರಿಯಾ ಹುಂಡೇಕರ್ ನನ್ನು ಬಂಧಿಸಿರುವ ಸಿಐಡಿ ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಅವರು ಮೊದಲ ರ್‍ಯಾಂಕ್ ಪಡೆದಿದ್ದ ಸುಪ್ರಿಯಾ ಅಕ್ರಮ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡು ನಿನ್ನೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಆರೋಪಿಯನ್ನು ವಿಚಾರಣೆ ಒಳಪಡಿಸಿ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ತೆಗೆದುಕೊಂಡು ಅಕ್ರಮವಾಗಿ ಪರೀಕ್ಷೆ ಬರೆದಿರುವ ಮತ್ತಷ್ಟು ಮಂದಿಯ ಬಗ್ಗೆ ಮಾಹಿತಿಯನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ತಂಡವು, ಇನ್ನೊಬ್ಬ ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದು, ಹುಡುಕಾಟ ನಡೆಸುತ್ತಿದೆ. ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕು ಹಿಪ್ಪರಗಾ ಗ್ರಾಮದ ನಿವಾಸಿ ಸುಪ್ರಿಯಾ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿರುವ ಆರೋಪ ಎದುರಿಸುತ್ತಿದ್ದಾರೆ.
ಕಲಬುರ್ಗಿಯ ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸುಪ್ರಿಯಾ ಪರೀಕ್ಷೆ ಬರೆದಿದ್ದರು. ಮೊದಲ ರ್‍ಯಾಂಕ್ ಪಡೆದಿದ್ದ ಸುಪ್ರಿಯಾ ೧ನೇ ಪತ್ರಿಕೆಯಲ್ಲಿ ೫೦ಕ್ಕೆ ೨೪, ೨ನೇ ಪತ್ರಿಕೆಯಲ್ಲಿ ೧೫೦ಕ್ಕೆ ೧೩೧.೨೫ ಅಂಕ ಪಡೆದಿದ್ದರು. ಎರಡೂ ಪತ್ರಿಕೆಗಳಿಂದ ೧೫೫.೨೫ ಅಂಕ ಪಡೆದಿದ್ದ ಸುಪ್ರಿಯಾ ಹುದ್ದೆಗೆ ಆಯ್ಕೆಯಾಗಿದ್ದರು.
ಪಿಎಸ್?ಐ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೆ ೫೨ ಮಂದಿಯನ್ನು ಸಿಐಡಿ ಬಂಧಿಸಿದೆ. ಕರ್ನಾಟಕ ಸರ್ಕಾರವು ಅಕ್ಟೋಬರ್ ೨೦೨೧ರಲ್ಲಿ ಪಿಎಸ್‌ಐ ನೇಮಕಾತಿಗಾಗಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಿತ್ತು. ಸುಮಾರು ೫೪,೦೪೧ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅಭ್ಯರ್ಥಿಗಳಿಂದ ಲಂಚ ಪಡೆದಿರುವ ಅಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರದ ಸಿಬ್ಬಂದಿ ಅಕ್ರಮ ಎಸಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಒತ್ತಡ ಹೆಚ್ಚಾಗಿ, ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ಆದೇಶಿಸಿತ್ತು.
ಆರಂಭದಲ್ಲಿ ಕಲಬುರ್ಗಿ ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದ ಹಲವರನ್ನು ಪೊಲೀಸರು ಬಂಧಿಸಿದ್ದರು. ನಂತರ ಪೊಲೀಸ್ ಅಧಿಕಾರಿಗಳ ಬಂಧನವಾಯಿತು. ನೇಮಕಾತಿ ವಿಭಾಗದ ಎಡಿಜಿಪಿ, ಐಪಿಎಸ್ ಅಧಿಕಾರಿ ಅಮ್ರಿತ್ ಪೌಲ್ ಅವರ ಬಂಧನ-ವಿಚಾರಣೆಯೂ ನಡೆಯಿತು.
ಸೇಡಂ ಪಟ್ಟಣದ ವೀರೇಶ್ ಎಂಬ ವಿದ್ಯಾರ್ಥಿಯ ವಿಚಾರಣೆಯ ನಂತರ ಹಗರಣದ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದವು. ಕಲಬುರ್ಗಿಯ ಜ್ಞಾನಜ್ಯೋತಿ ಶಾಲೆಯೇ ಅಕ್ರಮದ ಕೇಂದ್ರ ಎಂಬುದು ಸಾಬೀತಾಯಿತು. ಹಗರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಇದೇ ಶಾಲೆಯ ಆಡಳಿತ ಮಂಡಳಿಯ ಜವಾಬ್ದಾರಿ ಹೊತ್ತಿದ್ದರು. ದಿವ್ಯಾ ಹೆಸರು ಬಹಿರಂಗವಾದ ನಂತರ ರಾಜಕಾರಿಣಿಗಳ ಹಸ್ತಕ್ಷೇಪ ಇದ್ದ ಬಗ್ಗೆಯೂ ಮಾತುಗಳು ಕೇಳಿಬಂದಿದ್ದವು.
ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೆ ಕಲಬುರ್ಗಿ, ಬೆಂಗಳೂರು ಮತ್ತು ಇತರ ನಗರಗಳಲ್ಲಿ ಈವರೆಗೆ ನೂರಕ್ಕೂ ಹೆಚ್ಚು ಜನರಲ್ಲಿ ಸಿಐಡಿ ಬಂಧಿಸಿದೆ. ಈ ಪೈಕಿ ೫೨ ಅಭ್ಯರ್ಥಿಗಳು ಸೇರಿದ್ದಾರೆ. ಕಲಬುರ್ಗಿಯಲ್ಲಿ ೮ ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.