ಪಿಎಸ್‍ಐ ಅಕ್ರಮ ಪರೀಕ್ಷೆ : ಮತ್ತೆ 8 ಅಭ್ಯರ್ಥಿಗಳ ಬಂಧನ

ಕಲಬುರಗಿ,ಆ.5: 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣವು ಈಗ ಎಸ್‍ಬಿಆರ್ ಪರೀಕ್ಷಾ ಕೇಂದ್ರಕ್ಕೂ ಅಂಟಿಕೊಂಡಿದೆ. ಎಸ್‍ಬಿಆರ್ ಪರೀಕ್ಷಾ ಕೇಂದ್ರದಲ್ಲಿಯೂ ಸಹ ಅಕ್ರಮ ನಡೆದಿದೆ. ಈ ಮಧ್ಯೆ, ತನಿಖೆ ಕೈಗೊಂಡಿರುವ ಪೋಲಿಸರು ಪರೀಕ್ಷೆಯಲ್ಲಿ ಉತ್ತೀರ್ಣರಾದ 8 ಜನರನ್ನು ಬಂಧಿಸಿದ್ದಾರೆ.
ಬಂಧಿತರನ್ನು ರವಿರಾಜ್, ಪೀರಪ್ಪ, ಶ್ರೀಶೈಲ್, ಭಗವಂತ್, ಸಿದ್ದು ಪಾಟೀಲ್, ಸೋಮನಾಥ್, ಕಲ್ಲಪ್ಪ, ವಿಜಯಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತರ ಪೈಕಿ ಹಲವರು ಈಗಾಗಲೇ ಸರ್ಕಾರಿ ಹುದ್ದೆಯಲ್ಲಿ ಇದ್ದಾರೆ. ಅದಾಗಿಯೂ ಪಿಎಸ್‍ಐ ಆಗುವ ಹವಣಿಕೆಯಿಂದ ಅಕ್ರಮದ ಹಾದಿ ತುಳಿದಿದ್ದಕ್ಕಾಗಿ ಇದೀಗ ಜೈಲು ಪಾಲಾಗಿದ್ದಾರೆ.
ಬಂಧಿತ ಆರೋಪಿ ಸಿದ್ದು ಪಾಟೀಲ್ ಈಗಾಗಲೇ ಪ್ರಥಮ ದರ್ಜೆ ಗುಮಾಸ್ತನಾಗಿ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ.
ಇನ್ನೊಬ್ಬ ಬಂಧಿತ ಕಲ್ಲಪ್ಪನು ಪೋಲಿಸ್ ಪೇದೆಯಾಗಿ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಪೀರಪ್ಪ ಎಂಬ ಆರೋಪಿಯು ವಸತಿ ನಿಲಯದಲ್ಲಿ ಅಡಿಗೆ ಕೆಲಸದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ. ಈ ಎಲ್ಲ ಆರೋಪಿಗಳು ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಎಸ್ ಬಳಸಿ ಅಕ್ರಮವಾಗಿ ಪಿಎಸ್‍ಐ ಬರೆದ ಆರೋಪವನ್ನು ಎದುರಿಸುತ್ತಿದ್ದಾರೆ. ಎಂಟು ಜನ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕದ 371(ಜೆ) ಮೀಸಲಾತಿಯಡಿಯಲ್ಲಿ ಆಯ್ಕೆಯಾಗಿದ್ದರು. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 8 ಅಭ್ಯರ್ಥಿಗಳ ಹೆಸರು ಇತ್ತು.
ಬಂಧಿತ 8 ಜನರು ನಗರದ ಎಸ್‍ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜಿನಲ್ಲಿ ಪರೀಕ್ಷೆ ಬರೆದವರಾಗದ್ದಾರೆ. ಪಿಎಸ್‍ಐ ಪರೀಕ್ಷೆ ಅಕ್ರಮ ಮಾಡಿ ಸಿಕ್ಕಿ ಬಿದ್ದಿರುವ 8 ಜನ ಅಭ್ಯರ್ಥಿಗಳು ಜಿಲ್ಲೆಯ ಜೇವರ್ಗಿ ಹಾಗೂ ಅಫಜಲಪುರ ತಾಲ್ಲೂಕಿನ ನಿವಾಸಿಗಳಾಗಿದ್ದಾರೆ.
ಅಫಜಲಪುರ ತಾಲ್ಲೂಕಿನ ಮಲ್ಲಾಬಾದ್ ಗ್ರಾಮದ ರವಿರಾಜ್ ಅಖಂಡೆ, ಶಿದ್ನಾಳ್ ಗ್ರಾಮದ ಬೀರಪ್ಪ, ಕರ್ಜಗಿ ರಸ್ತೆಯ ರಾಮನಗರದ ಕಲ್ಲಪ್ಪ ಅಲ್ಲಾಪುರ, ಕೋಣಸಿರಸಗಿಯ ಶ್ರೀಶೈಲ್, ಜೇವರ್ಗಿ ತಾಲ್ಲೂಕಿನ ಕೋಣಸಿರಸಗಿಯ ಶ್ರೀಶೈಲ್, ಜೇವರ್ಗಿ ತಾಲ್ಲೂಕಿನ ಜೇರಟಗಿ ಗ್ರಾಮದ ಭಗವಂತರಾಯ್ ಯಾತನೂರ್, ಬದನಿಹಾಳ್ ಗ್ರಾಮದ ಸೋಮನಾಥ್, ಗುಡೂರ್ ಎಸ್ ಗ್ರಾಮದ ವಿಜಯಕುಮಾರ್ ಅವರನ್ನೇ ಬಂಧಿಸಲಾಗಿದೆ.
ಬಂಧಿತರಲ್ಲಿ ಸಿದ್ದಣಗೌಡ ಪಾಟೀಲ್ ಎಂಬಾತನು ಆರ್.ಡಿ. ಪಾಟೀಲ್ ಅಳಿಯ (ಪತ್ನಿಯ ತಮ್ಮ) ಸಹ ಸೇರಿದ್ದಾನೆ.
ಎಲ್ಲ 8, ಜನರಿಗೆ ಅಕ್ರಮವಾಗಿ ಪಿಎಸ್‍ಐ ಮಾಡಲು ಆಸೆ ತೋರಿಸಿದ್ದೆ ರೂವಾರಿ ಆರ್.ಡಿ. ಪಾಟೀಲ್. ಎಲ್ಲ ಎಂಟು ಜನ ಅಭ್ಯರ್ಥಿಗಳು ಆರ್.ಡಿ. ಪಾಟೀಲ್ ಜೊತೆಗೆ ಡೀಲ್ ಮಾಡಿಕೊಂಡವರು ಎನ್ನುವುದು ಗೊತ್ತಾಗಿದೆ. ಪ್ರಕರಣದ ಪ್ರಮುಖ ರೂವಾರಿ ಆರ್.ಡಿ. ಪಾಟೀಲ್, ಎಲ್ಲ ಅಭ್ಯರ್ಥಿಗಳೊಂದಿಗೆ ಹಣಕಾಸಿನ ಡೀಲ್ ಮಾಡಿಕೊಂಡಿದ್ದಲ್ಲದೇ ಎಲ್ಲರಿಗೂ ಬ್ಲ್ಯೂಟೂತ್ ಡಿವೈಸ್ ಪೂರೈಕೆ ಮಾಡಿದ್ದ.
ಪಿಎಸ್‍ಐ ನೇಮಕಾತಿಯ ಅಕ್ರಮ ಪ್ರಕರಣದ ತನಿಖೆ ಕೈಗೊಂಡಿರುವ ಸಿಐಡಿ, ಬಗೆದಷ್ಟು ಬಯಲಾಗುತ್ತಲೇ ಇದೆ. ಈಗಾಗಲೇ ಪ್ರಕರಣದಲ್ಲಿ ಸಿಐಡಿ 44 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಈಗ ಒಮ್ಮೆಲೆ 8 ಜನ ಅಭ್ಯರ್ಥಿಗಳನ್ನು ಬಂಧಿಸಲಾಗಿದ್ದು, ಇದುವರೆಗೆ ಬಂಧಿತರ ಸಂಖ್ಯೆ ಈಗ 52ಕ್ಕೆ ಏರಿಕೆಯಾಗಿದೆ.