ಪಿಎಸ್‍ಐ ಅಕ್ರಮ ನೇಮಕಾತಿ : ಮಲ್ಲುಗೌಡ ಪಾಟೀಲ್ ಬಿದನೂರಗೆ ಷರತ್ತುಬದ್ಧ ಜಾಮೀನು

ಕಲಬುರಗಿ,ಆ.5: 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಆರೋಪಿ ಮಲ್ಲುಗೌಡ ಪಾಟೀಲ್ ಬಿದನೂರ್‍ಗೆ ಕಲಬುರ್ಗಿಯ ಜೆಎಂಎಫ್‍ಸಿ ನ್ಯಾಯಾಲಯವು ಗುರುವಾರ ಷರತ್ತುಬದ್ಧ ಜಾಮೀನು ನೀಡಿದೆ.
ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಶ್ರೀಮತಿ ದಿವ್ಯಾ ಹಾಗರಗಿಗೆ ರಕ್ಷಣೆ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾದ ಮಹಾರಾಷ್ಟ್ರದ ಸುರೇಶ್ ಕಾಟೇಗಾಂವಕರ್‍ನಿಗೆ ಈ ಮೊದಲು ಶರತ್ತುಬದ್ಧ ಜಾಮೀನು ದೊರಕಿದ್ದು, ಈಗ ಮಲ್ಲುಗೌಡ ಪಾಟೀಲ್ ಬಿದನೂರ್‍ಗೂ ಜಾಮೀನು ದೊರೆತಿರುವುದರಿಂದ ಪ್ರಕರಣದಲ್ಲಿ ಜಾಮೀನು ಪಡೆದ ಎರಡನೇ ಆರೋಪಿಯಾಗಿದ್ದಾನೆ.
ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿನ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಜೊತೆಗೆ ಮಲ್ಲುಗೌಡ ಪಾಟೀಲ್ ಬಿದನೂರ್‍ಗೂ ಬಂಧಿಸಲಾಗಿತ್ತು. ಎಂ.ಬಿ. ನಗರ ಜೈಲಿನಲ್ಲಿ ಆರ್.ಡಿ. ಪಾಟೀಲ್ ಖುರ್ಚಿ ಹಾಕಿಕೊಂಡು ಕುಳಿತಾಗ ಆತನ ಸೇವನಕನಂತೆ ನಿಂತ ಮಲ್ಲುಗೌಡ ಪಾಟೀಲ್ ಸಾಕಷ್ಟು ವಿವಾದಕ್ಕೂ ಒಳಗಾಗಿದ್ದ.
ಈಗಾಗಲೇ ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಕುರಿತು ಪೋಲಿಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದಾರೆ. ಆದಾಗ್ಯೂ, ಆರೋಪಿಗಳೆಲ್ಲರೂ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೂ ಸಹ ಜಾಮೀನು ಅರ್ಜಿಗಳನ್ನು ನ್ಯಾಯಾಲಯವು ತಿರಸ್ಕರಿಸುತ್ತಿದೆ. ಆದಾಗ್ಯೂ, ಪ್ರಕರಣದಲ್ಲಿ ಇಬ್ಬರು ಈಗ ಜಾಮೀನು ಪಡೆದಂತಾಗಿದೆ.