ಪಿಎಸ್‌ಐ ಅಕ್ರಮ ಇಬ್ಬರಿಗೆ ಜಾಮೀನು

ಬೆಂಗಳೂರು, ನ.೧೮-೫೪೫ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಸಂಬಂಧ ಪ್ರಕರಣದ ಮೊದಲ ಆರೋಪಿಗೆ ಹಾಗೂ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆದ ಅಭ್ಯರ್ಥಿಗೆ ನ್ಯಾಯಾಲಯವು ಜಾಮೀನು ನೀಡಿದೆ.
ಪಿಎಸ್‌ಐ ಹಗರಣದ ಆರೋಪಿ ಜಾಗೃತ್ ಹಾಗೂ ಮಹಿಳಾ ಕೋಟಾದಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದ ರಚನಾಗೆ ಜಾಮೀನು ದೊರೆತಿದೆ.ಆರೋಪಿಗಳ ಪರ ವಕೀಲ ಶ್ಯಾಮ್‌ಸುಂದರ್ ಅವರು ವಾದ ಮಾಡಿದ್ದರು.೫೪೫ ಪಿಎಸ್‌ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ೧೭ನೇ ಆರೋಪಿ ರಚನಾಳನ್ನು ಸಿಐಡಿ ವಿಶೇಷ ತನಿಖಾ ತಂಡ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಶಕ್ಕೆ ಪಡೆದಿತ್ತು. ನೇಮಕಾತಿಯ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ರಚನಾ ಹನುಮಂತ್ ಮೊದಲ ರ್‍ಯಾಂಕ್ ಪಡೆದಿದ್ದಳು.ಅಕ್ರಮ ಪ್ರಕರಣ ಬಯಲಾಗುತ್ತಿದ್ದಂತೆ ರಚನಾ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದಳು. ಸಿಐಡಿ ತನಿಖೆಯಲ್ಲಿ ರಚನಾ ೩೦ ಲಕ್ಷ ನೀಡಿದ್ದರೆಂಬ ಮಾಹಿತಿ ಬಹಿರಂಗವಾಗಿತ್ತು. ಈ ಸಂಬಂಧ ೨೨ ಅಭ್ಯರ್ಥಿಗಳ ವಿರುದ್ಧ ಸಿಐಡಿ ಡಿವೈಎಸ್‌ಪಿ ನರಸಿಂಹಮೂರ್ತಿ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದರು.ದೂರಿನನ್ವಯ ಪ್ರಕರಣ ದಾಖಲಿಸಲಾಗಿತ್ತು. ರಚನಾ ಸರ್ಕಾರದ ಮರುಪರೀಕ್ಷಾ ಆದೇಶದ ವಿರುದ್ಧವೂ ಪ್ರತಿಭಟನೆಯೂ ಭಾಗಿಯಾಗಿದ್ದು ತನ್ನ ವಿರುದ್ಧ ಎಫ್‌ಐಆರ್ ದಾಖಲಾದ ಬಳಿಕ ರಚನಾ ನಾಪತ್ತೆಯಾಗಿದ್ದಳು.ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಎಸ್.ಜಾಗೃತ್‌ನ್ನು ಸಿಐಡಿ ಡಿವೈಎಸ್‌ಪಿ ಬಿ.ಕೆ.ಶೇಖರ್ ತಂಡ ಚನ್ನಪಟ್ಟಣದಲ್ಲಿ ಬಂಧಿಸಿತ್ತು. ಎಸ್.ಜಾಗೃತ್ ಪಿಎಸ್‌ಐ ಪರೀಕ್ಷೆಯಲ್ಲಿ ೪ನೇ ರ್ಯಾಂಕ್ ಪಡೆದಿದ್ದ.ಎಸ್.ಜಾಗೃತ್ ವಿರುದ್ಧ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಎಫ್‌ಐಆರ್ ಹಾಕಿರುವುದನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ನಾಲ್ವರು ಅಭ್ಯರ್ಥಿಗಳಲ್ಲಿ ಈ ಜಾಗೃತನೂ ಒಬ್ಬನಾಗಿದ್ದ.೫೪೫ ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ನಡೆದ ಪರೀಕ್ಷಾ ಹಗರಣದಲ್ಲಿ ಹಣದ ಹೊಳೆ ಹರಿದಿರುವುದು ತನಿಖೆ ವೇಳೆ ದೃಢವಾಗಿತ್ತು. ತನಿಖೆ ಹೆಚ್ಚಾದಂತೆ ಒಂದೊಂದು ಅಕ್ರಮ ಬೆಳಕಿಗೆ ಬರುತ್ತಿದೆ. ಬ್ಲೂಟೂತ್ ಬಳಕೆ ಮಾಡಿ ಎಕ್ಸಾಂ ಬರೆದಿರುವುದು, ಒಎಂಆರ್ ಪ್ರತಿಯನ್ನ ಎಕ್ಸಾಂ ಸೆಂಟರ್‌ನಲ್ಲಿ ತಿದ್ದುಪಡಿ ಮಾಡಿರುವುದು, ನೇಮಕಾತಿ ವಿಭಾಗದಲ್ಲಿ ಒಎಂಆರ್ ಪ್ರತಿಯಲ್ಲಿ ಅಕ್ರಮ ತಿದ್ದುಪಡಿ ಮಾಡಿರುವುದು, ಸೀಟಿಂಗ್ ವ್ಯವಸ್ಥೆ ಮಾಡಿ ಅಕ್ರಮ ಎಸಗಿ ಬರೆದಿರುವುದು, ಸಂಪೂರ್ಣ ಹುದ್ದೆಯನ್ನು ಡೀಲ್ ಮಾಡಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.