ಪಿಎಸ್‌ಐಗೆ ಅಕ್ರಮ ಸರ್ಕಾರ ರಕ್ಷಣೆಗೆ ಸೀಮಿತ

ಕಲಬುರಗಿ,ಮೇ.೧೪-೫೪೫ ಪಿ.ಎಸ್.ಐ. ನೇಮಕಾತಿ ಅಕ್ರಮ ಕುರಿತಂತೆ ಸಿಐಡಿ ನಡೆಸುತ್ತಿರುವ ತನಿಖೆ ಕೇವಲ ರಾಜ್ಯ ಸರಕಾರವನ್ನು ರಕ್ಷಿಸುವ ನೆಲೆಗಟ್ಟಿನಲ್ಲಿ ಮಾತ್ರ ನಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ನೇರ ಆರೋಪ ಮಾಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಐಡಿ ತನಿಖೆಗೆ ಸಂಬಂಧಿಸಿದಂತೆ ಕೇವಲ ಆಯ್ದ ಅಂಶಗಳನ್ನು ಮಾತ್ರ ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಲಾಗುತ್ತಿದೆ. ಉಳಿದಂತೆ ಸರಕಾರವನ್ನು ರಕ್ಷಿಸುವ ದೃಷ್ಟಿಯಿಂದ ತನಿಖೆಯ ಹಾದಿ ತಪ್ಪಿಸಲಾಗುತ್ತಿದೆ ಎಂದು ಟೀಕಿಸಿದರು.
ಈ ಹಿಂದೆ ಸದನದಲ್ಲಿ ಖುದ್ದು ಗೃಹ ಸಚಿವರು ಹೇಳಿಕೆ ನೀಡಿ ಪಿ.ಎಸ್.ಐ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆಸಿದ್ದು ಅಕ್ರಮ ನಡೆದಿಲ್ಲ ಎಂದಿದ್ದರು. ಹಾಗಾದರೆ, ಆ ತನಿಖಾ ವರದಿ ಎಲ್ಲಿದೆ? ಎಂದು ಪ್ರಶ್ನಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಎಷ್ಟು ಖಾಸಗಿ ಮತ್ತು ಸರಕಾರಿ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂಬುದನ್ನು ಸರಕಾರ ಬಹಿರಂಗಪಡಿಸಬೇಕು. ಈ ದಿಕ್ಕಿನಲ್ಲಿ ಉದ್ದೇಶಪೂರ್ವಕವಾಗಿ ಹಾದಿ ತಪ್ಪಿಸುವ ಕೆಲಸ ನಡೆದಿದೆ ಎಂದರು.
೫೪೫ ಪಿ.ಎಸ್.ಐ.ಗಳ ನೇಮಕಾತಿ ಪರೀಕ್ಷೆ ನಡೆದ ಬಳಿಕ ಪರೀಕ್ಷಾ ಪ್ರಾಧಿಕಾರದ ಜಾಲತಾಣದಲ್ಲಿ ಅಭ್ಯರ್ಥಿಗಳ ಒಎಂಆರ್ ಶೀಟ್ ಮತ್ತು ಉತ್ತರ ಪತ್ರಿಕೆಗಳನ್ನು ಅಪ್ ಲೋಡ್ ಮಾಡಿಲ್ಲ. ಬದಲಿಗೆ ಜಾಲತಾಣವನ್ನೇ ಬಂದ್ ಮಾಡಲಾಗಿದೆ. ಇದರ ಹಿಂದಿನ ಮರ್ಮ ಏನು ಎಂದು ಪ್ರಿಯಾಂಕ್ ಕುಟುಕಿದರು.
೨೦೨೧ ಅಕ್ಟೋಬರ್ ೨೩ರಂದು ಪೊಲೀಸ್ ಪೇದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆ ವೇಳೆ ಕಲಬುರಗಿಯಲ್ಲಿ ಒಂಬತ್ತು ಮತ್ತು ಬೆಳಗಾವಿಯಲ್ಲಿ ೧೨ ಅಭ್ಯರ್ಥಿಗಳು ಬ್ಲೂಟೂತ್ ಬಳಸಿದ ಕಾರಣಕ್ಕಾಗಿ ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ಎಲ್ಲಿಗೆ ತಲುಪಿದೆ, ತನಿಖಾ ವರದಿ ಎಲ್ಲಿದೆ, ಎಂದು ಪ್ರಿಯಾಂಕ್ ತರಾಟೆಗೆ ತೆಗೆದುಕೊಂಡರು.