ಆಳಂದ :ಜೂ.20:ಪಟ್ಟಣದ ಪ್ರತಿಷ್ಠಿತ ಎಸ್‍ಆರ್‍ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ಪೂಜ್ಯ ಶ್ರೀ ರಾಜಶೇಖರ ಮಹಾಸ್ವಾಮೀಜಿ ಬಿ.ಎಡ್ ಶಿಕ್ಷಣ ಮಹಾವಿದ್ಯಾಲಯಕ್ಕೆ 2019-20 ಮತ್ತು 2020-21ನೇ ಸಾಲಿನ ಪ್ರಥಮ ರ್ಯಾಂಕ್‍ಗಳು ಲಭಿಸಿವೆ.
ಸೋಮವಾರ ಕಲಬುರಗಿಯ ವಿವಿಯಲ್ಲಿ ಜರುಗಿದ ವಿವಿಯ ಘಟಿಕೋತ್ಸವದಲ್ಲಿ ಇಬ್ಬರೂ ವಿದ್ಯಾರ್ಥಿಗಳಿಗೆ ರ್ಯಾಂಕ್ ಪದವಿ ಪ್ರದಾನ ಮಾಡಲಾಯಿತು. 2019-20ನೇ ಸಾಲಿನಲ್ಲಿ ರೈಸಾ ಬೇಗಂ, 2020-21ನೇ ಸಾಲಿನಲ್ಲಿ ಮೇಘಾ ಕಣ್ಮಸ್ ಗುಲ್ಬರ್ಗಾ ವಿವಿಗೆ ಬಿ.ಎಡ್‍ನಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರೂ ಮಾಜಿ ಶಾಸಕರಾದ ಸುಭಾಷ್ ಆರ್ ಗುತ್ತೇದಾರ, ಕಾರ್ಯದರ್ಶಿಗಳಾದ ಹರ್ಷಾನಂದ ಗುತ್ತೇದಾರ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ, ಪ್ರಾಚಾರ್ಯ ಅಶೋಕರೆಡ್ಡಿ ಸೇರಿದಂತೆ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಸತತ ಅಭ್ಯಾಸ, ಉಪನ್ಯಾಸಕರ ಸೂಕ್ತ ಮಾರ್ಗದರ್ಶನದಿಂದ ರ್ಯಾಂಕ್ ಪಡೆಯಲು ಸಾಧ್ಯವಾಗಿದೆ ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಕಿಯಾಗಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಸಂಕಲ್ಪ ಹೊಂದಿದ್ದೇನೆ- ರೈಸಾ ಬೇಗಂ, ರ್ಯಾಂಕ್ ಪಡೆದ ವಿದ್ಯಾರ್ಥಿ
ಇಷ್ಟ ಪಟ್ಟು ಓದಿದ್ದರಿಂದ ಹಾಗೂ ಕಾಲೇಜಿನಲ್ಲಿ ಒಳ್ಳೆಯ ಶೈಕ್ಷಣಿಕ ವಾತಾವರಣ ಇದ್ದುದ್ದರಿಂದ ರ್ಯಾಂಕ್ ಗಳಿಸಲು ಸಾಧ್ಯವಾಗಿದೆ. ಕಾಲೇಜಿನಲ್ಲಿ ಓದಿಗೆ ಪೂರಕ ವಾತಾವರಣ ಇತ್ತು ಮುಂದೆ ಶಿಕ್ಷಕಿಯಾಗಬೇಕು ಎನ್ನುವ ಮಹತ್ವಾಕಾಂಕ್ಷಿ ಹೊಂದಿದ್ದೇನೆ- ಮೇಘಾ ಕಣ್ಮಸ್, ರ್ಯಾಂಕ್ ಪಡೆದ ವಿದ್ಯಾರ್ಥಿ
ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ನಮ್ಮ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ವೈಜ್ಞಾನಿಕ ಬೋಧನಾ ಪದ್ಧತಿಗಳನ್ನು ಅಳವಡಿಸಿಕೊಂಡು ಉಪನ್ಯಾಸಕರು ಶಿಕ್ಷಣ ನೀಡುತ್ತಿದ್ದಾರೆ ಸಮರ್ಪಣಾ ಮನೋಭಾವದ ಉಪನ್ಯಾಸಕರ ಶ್ರಮದಿಂದ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿದೆ- ಹರ್ಷಾನಂದ ಗುತ್ತೇದಾರ, ಸಂಸ್ಥೆಯ ಕಾರ್ಯದರ್ಶಿಗಳು.