ಪಿಎಸಿ ಕಮಾಂಡರ್ ಎತ್ತಂಗಡಿ ಮಾಡಿದ ಚೀನಾ

ನವದೆಹಲಿ, ಡಿ ೨೧-ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾ ಲಿಬರೇಷನ್ ಆರ್ಮಿಯ ಪೂರ್ವ ಕಮಾಂಡರ್ ಜನರಲ್ ಜಾವೊ ಜಾಂಗ್‌ಕಿ ಅವರನ್ನು ಅಧ್ಯಕ್ಷ ಕ್ಷಿನ್ ಜಿನ್ ಪಿಂಗ್ ಎತ್ತಂಗಡಿ ಮಾಡಿದ್ದಾರೆ. ಇವರ ಜಾಗದಲ್ಲಿ ಜನರಲ್ ಜಾಂಗ್ ಜುಡಾಂಗ್ ಅವರನ್ನು ನೇಮಕ ಮಾಡಿದ್ದಾರೆ.
ಭಾರತ-ಚೀನಾ ನಡುವಣ ಗಡಿ ಬಿಕ್ಕಟ್ಟು ಕುರಿತಂತೆ ಪೂರ್ವ ಲಡಾಖ್‌ನಲ್ಲಿ ಕಳೆದ ಏಳು ತಿಂಗಳಿನಿಂದ ಸೇನಾ ಜಮಾವಣೆಗೆ ಜಾವೊ ಹೊಣೆಗಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಚೀನಾ ಅಧ್ಯಕ್ಷರು ಕೈಗೊಂಡಿರುವ ಈ ಕ್ರಮದಿಂದಾಗಿ ಎರಡೂ ದೇಶಗಳ ನಡುವಣ ಉಂಟಾಗಿರುವ ಗಡಿ ತಕರಾರು ಮತ್ತು ಗಡಿಯಲ್ಲಿ ಜಮಾವಣೆಗೊಂಡಿರುವ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ವಿಚಾರದಲ್ಲಿ ಹೊಸ ಆಶಾಭಾವ ಮೂಡಿಸಿದೆ.
ಭಾರತದ ಗಡಿಯಲ್ಲಿ ಸೇವೆ ಸಲ್ಲಿಸಿ ಅನುಭವವಿಲ್ಲದ ೫೮ ವರ್ಷದ ಜನರಲ್ ಜಾಂಗ್ ಅವರನ್ನು ಇದೇ ಮೊದಲ ಬಾರಿಗೆ ನೇಮಕ ಮಾಡಲಾಗಿದೆ. ವರ್ಗಾವಣೆಗೊಂಡ ೬೫ ವರ್ಷದ ಜಾವೊಗಿಂತ ಕಿರಿಯ ವಯಸ್ಸಿನವರಾಗಿದ್ದಾರೆ.
ಲಡಾಖ್ ವಲಯದಲ್ಲಿ ಜಮಾವಣೆಗೊಂಡಿರುವ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಸಂಬಂಧ ಎರಡೂ ದೇಶಗಳ ನಡುವೆ ಹಲವು ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆಗಳು ನಡೆದಿದ್ದರೂ ಪೂರ್ಣಪ್ರಮಾಣದಲ್ಲಿ ಸೇನೆ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಂಡಿಲ್ಲ.
ಈಗ ಹೊಸ ಕಮಾಂಡರ್ ನೇಮಕವಾಗಿರುವುದರಿಂದ ಮುಂದಿನ ಮಾತುಕತೆ ವೇಳೆ ಸೇನೆ ವಾಪಸ್ ಕರೆಸಿಕೊಳ್ಳುವ ಕುರಿತು ಸಮಾಲೋಚನೆ ನಡಸಲು ಭಾರತದ ಸೇನಾಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದ್ದಾರೆ.