ಪಿಎಫ್‌ಐ ಬೆಂಬಲಿಗರಿಗೆ ಎನ್‌ಐಎ ಶಾಕ್

ನವದೆಹಲಿ,ಏ.೨೫- ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಮತ್ತು ಅದರ ಬೆಂಬಲಿಗರ ವಿರುದ್ಧದ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಅಧಿಕಾರಿಗಳು ಇಂದು ನಾಲ್ಕು ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದ ಎರಡು, ಪಂಜಾಬ್ ಮತ್ತು ಗೋವಾದಲ್ಲಿ ತಲಾ ಒಂದು ಸ್ಥಳ ಸೇರಿದಂತೆ ಬಿಹಾರದಲ್ಲಿ ಹನ್ನೆರಡು ಸ್ಥಳಗಳಲ್ಲಿ ಏಕಕಾಲದಲ್ಲಿ ಪಿಎಫ್ ಐ ಬೆಂಬಲಿಗರ ಮನೆ ಕಚೇರಿಗಳ ಮೇಲೆ ದಾಳಿ ಕೈಗೊಂಡು ಶೋಧ ನಡೆಸಲಾಗಿದೆ. ಪಿಎಫ್‌ಐಗೆ ಸಂಬಂಧಿಸಿದ ವ್ಯಕ್ತಿಗಳ ಬಗ್ಗೆ ಮಾಹಿತಿಯ ಆಧಾರದ ಮೇಲೆ ದಾಳಿಗಳನ್ನು ನಡೆಸಿ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ಪಿಎಫ್ ಐ ಮತ್ತು ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ ನಲ್ಲಿ ನಿಷೇಧಿಸಿತ್ತು. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪಿಎಫ್‌ಐ ಮೇಲಿನ ನಿಷೇಧವನ್ನು ಮಾರ್ಚ್‌ನಲ್ಲಿ ನ್ಯಾಯಮಂಡಳಿ ಎತ್ತಿಹಿಡಿದಿದೆ. ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವದ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಸರ್ಕಾರದ ಸಲ್ಲಿಕೆಯನ್ನು ನ್ಯಾಯಮಂಡಳಿ ಒಪ್ಪಿಕೊಂಡಿದೆ.