ಪಿಎಫ್‌ಐ ಕಚೇರಿ, ನಾಯಕರ ಮನೆ ಮೇಲೆ ಎನ್‌ಐಎ ದಾಳಿ

ಮಂಗಳೂರು, ಸೆ.೨೨- ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಾಯಕರ ಮನೆ ಹಾಗೂ ಎಸ್‌ಡಿಪಿಐ ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ನಡೆಸಿದ ಘಟನೆ ಇಂದು ಮುಂಜಾನೆ ನಗರದ ಹಲವೆಡೆ ನಡೆದಿದೆ. ದಾಳಿ ಹಿನ್ನೆಲೆಯಲ್ಲಿ ಸುದ್ದಿ ತಿಳಿಯುತ್ತಿದ್ದಂತೆ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರು ನಾಯಕರ ಮನೆ ಮುಂಭಾಗ ಜಮಾಯಿಸಿ, ಎನ್‌ಐಎ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪಿಎಫ್‌ಐ ನಾಯಕರಾದ ಶರೀಫ್ ಬಜ್ಪೆ, ಅಶ್ರಫ್ ಜೋಕಟ್ಟೆ, ಮೊಯಿದಿನ್ ಹಳೆಯಂಗಡಿ, ನವಾಝ್ ಕಾವೂರು ಹಾಗೂ ಖಾದರ್ ಕುಳಾಯಿ ಅವರ ಮನೆ ಮೇಲೆ ಮತ್ತು ಪಿಎಫ್‌ಐ, ಎಸ್‌ಡಿಪಿಐ ಕಚೇರಿ ಮೇಲೆ ಎನ್‌ಐಎ ಅಧಿಕಾರಿಗಳು ಇಂದು ಮುಂಜಾನೆ ವೇಳೆ ದಾಳಿ ನಡೆಸಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಕುರಿತು ತನಿಖೆ ಆರಂಭಿಸಿದ ಎನ್.ಐ.ಎ.ಕೇಂದ್ರ ಪೋಲೀಸ್ ತಂಡ ಅದಕ್ಕೆ ಸಂಬಂಧಿಸಿದಂತೆ ಹಾಗೂ ಇನ್ನಿತರ ಪ್ರಕರಣಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಲು ರಾಜ್ಯದ ಹಲವು ಕಡೆಗೆ ಇಂದು ಮುಂಜಾನೆ ಏಕಕಾಲದಲ್ಲಿ ದಾಳಿ ನಡೆಸಿದೆ. ದಾಳಿಯ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದ್ದು, ಬಂದರು-ನೆಲ್ಲಿಕಾಯಿ ರಸ್ತೆಗೆ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದ್ದು, ಪ್ರತಿಭಟನಾಕಾರ ನಿರತ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಎನ್‌ಐಎ ದಾಳಿ ನಡೆದ ನೆಲ್ಲಿಕಾಯಿ ರಸ್ತೆಗೆ ಮಂಗಳೂರು ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದ್ದಾರೆ.

ಇತರೆಡೆಗಳಲ್ಲೂ ದಾಳಿ
ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಕಾನೂನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ಬೆಳಗ್ಗೆ ಪಿಎಫ್‌ಐ ಸೇರಿದಂತೆ ಹಲವು ಸಂಘಟನೆಗಳು ಮತ್ತು ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಕೇರಳದ ಮಲಪ್ಪುರಂನಲ್ಲಿ ಪಿಎಫ್‌ಐ ಅಧ್ಯಕ್ಷ ಓಎಂಎ ಸಲಾಂ ಅವರ ನಿವಾಸದ ಮೇಲೆ ಹಾಗೂ ೧೦ ರಾಜ್ಯಗಳಲ್ಲಿ ಪಿಎಫ್‌ಐ ಕಚೇರಿಗಳ ಮೇಲೆ ದಾಳಿ ನಡೆದಿದೆ ಎಂದು ಎಎನ್‌ಐ ವರದಿ ಮಾಡಿದೆ. ತಮಿಳುನಾಡಿನ ಕೊಯಮತ್ತೂರು, ಕುಡಲೂರು, ರಾಮನಾಡು, ದಿಂಡುಗಲ್, ಥೇಣೀ ಮತ್ತು ಥೆಂಕಾಸಿಯಲ್ಲಿ ಕೂಡಾ ಪಿಎಫ್‌ಐ ಪದಾಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ. ಚೆನ್ನೈ ಪಿಎಫ್‌ಐ ರಾಜ್ಯ ಕೇಂದ್ರ ಕಚೇರಿಯಲ್ಲಿ ಕೂಡ ಶೋಧನೆ ನಡೆಸಲಾಗಿದೆ. ಕೇಂದ್ರೀಯ ಏಜೆನ್ಸಿಗಳ ದಾಳಿಯನ್ನು ಖಂಡಿಸಿ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ.

ಬೋಳಂತೂರಿನಲ್ಲಿ ಮನೆ ಮೇಲೆ ದಾಳಿ
ಬಂಟ್ವಾಳ, ಸೆ.೨೨- ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜ್ಯ ಪೋಲೀಸ್ ನಿರ್ದೇಶನದಂತೆ ಬಂಟ್ವಾಳ ಹಾಗೂ ವಿಟ್ಲ ಪೋಲೀಸರ ತಂಡ ಇಂದು ಮುಂಜಾನೆ ವೇಳೆ ಬೋಳಂತೂರು ವ್ಯಕ್ತಿಯೋರ್ವನ ಮನೆಗೆ ದಾಳಿ ನಡೆಸಿ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿದೆ.
ಬೋಳಂತೂರು ನಿವಾಸಿ ಮಹಮ್ಮದ್ ಕುಟ್ಟಿ ಎಂಬವರ ಪುತ್ರ ಮಹಮ್ಮದ್ ತಬ್ಸೀರ್ ಎಂಬವರ ಮನೆಗೆ ಮುಂಜಾನೆ ಮೂರು ಗಂಟೆ ವೇಳೆ ಪೋಲೀಸ್ ದಾಳಿ ನಡೆಸಿದ್ದು, ಆದರೆ ಯಾವ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸಲಾಗಿದೆ ಎಂಬ ವಿಚಾರ ಪೋಲೀಸರು ಬಹಿರಂಗ ಪಡಿಸಿಲ್ಲ. ರಾಜ್ಯದ ಪ್ರಕರಣವೊಂದಕ್ಕೆ ಹಲವು ವಿಚಾರಗಳನ್ನು ಕುರಿತು ಈ ದಾಳಿ ನಡೆದಿದ್ದು, ತಬ್ಸೀರ್ ಅವರಿಗೆ ಸೇರಿದ ಎರಡು ಮನೆಗಳಿಗೆ ದಾಳಿ ನಡೆಸಿ ಅ ಪ್ರಕೆ ಸಂಬಂಧ ಎಲ್ಲಾ ಮಾಹಿತಿ ಕಲೆ ಹಾಕಲಾಗಿತ್ತಿದೆ.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ,ವಿಟ್ಲ ಇನ್ಸ್ ಪೆಕ್ಟರ್ ನಾಗರಾಜ್ ಎಚ್, ನಗರ ಠಾಣಾ ಪೋಲೀಸ್ ಎಸ್. ಐ.ಅವಿನಾಶ್, ಗ್ರಾಮಾಂತರ ಎಸ್ ಐ ಹರೀಶ್, ವಿಟ್ಲ ಎಸ್.ಐ.ಸಂದೀಪ್ ಸಹಿತ ಇಡೀ ಪೋಲೀಸ್ ತಂಡ ಇಲ್ಲಿ ಮೊಕ್ಕಾಂ ಇದ್ದು ಭದ್ರತೆ ಒದಗಿಸಿ ತನಿಖೆ ನಡೆಸುತ್ತಿದೆ.