ಪಿಎಫ್‌ಐ, ಎಸ್ಡಿಪಿಐ ಮೇಲೆ ದಾಳಿಸುಳ್ಯ, ಉಪ್ಪಿನಂಗಡಿಯಲ್ಲಿ ಮುಂಜಾನೆ ಎನ್‌ಐಎ ದಾಳಿ: ಮೂವರು ವಶ


ಮಂಗಳೂರು, ನ.೫- ಬಿಜೆಪಿಯ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮುಂಜಾನೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಮುಖಂಡರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು (ಎನ್‌ಐಎ) ಮತ್ತೆ ದಾಳಿ ನಡೆಸಿದ್ದಾರೆ. ಉಪ್ಪಿನಂಗಡಿ ಹಾಗೂ ಸುಳ್ಯದಲ್ಲಿ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳ ತಂಡ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದು, ಪರಿಶೀಲನೆ ನಡೆಸಿದೆ. ಅದೂ ಅಲ್ಲದೆ ರಾಜ್ಯದ ಇತರೆಡೆಗಳಲ್ಲೂ ಎನ್‌ಐಎ ದಾಳಿ ನಡೆಸಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳ ತಂಡ ಇಂದು ಮುಂಜಾನೆ ಇಬ್ರಾಹಿಂ ಶಾ, ಶಾಫಿ ಬೆಳ್ಳಾರೆ, ಹಾಗೂ ಇಕ್ಬಾಲ್ ಎಂಬ ಮೂವರನ್ನು ಶನಿವಾರ ಮುಂಜಾನೆ ಉಪ್ಪಿನಂಗಡಿ ಮತ್ತು ಸುಳ್ಯದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಶಾಫಿ ಬೆಳ್ಳಾರೆ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿಯಾಗಿದ್ದು, ಇಕ್ಬಾಲ್ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ ಹಾಗೂ ಸುಳ್ಯದ ಇಬ್ರಾಹಿಂ ಸೇರಿ ಶನಿವಾರ ಮುಂಜಾನೆ ಮನೆಯಲ್ಲೇ ವಶಕ್ಕೆ ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡ ಅಲ್ಲದೆ ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವಡೆ ನಿಷೇಧಿತ ಪಿಎಫ್‌ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ಎನ್‌ಐಎ ಅಧಿಕಾರಿಗಳು ಇಂದು ಮುಂಜಾನೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ. ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಮಂದಿ ನಾಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಇದೀಗ ದಾಳಿ ನಡೆಸಿ, ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಇನ್ನು ಕೆಲ ವಾರಗಳ ಹಿಂದೆಯಷ್ಟೇ ದೇಶಾದ್ಯಂತ ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಬಳಿಕ ಪಿಎಫ್‌ಐ ಸಂಘಟಗೆ ಐದು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು.  


ಹಲವೆಡೆ ಇ.ಡಿ ಅಧಿಕಾರಿಗಳ ದಾಳಿ
ಜಾರ್ಖಂಡ್‌ನಲ್ಲಿ ರಕ್ಷಣಾ ಇಲಾಖೆಗೆ ಸೇರಿದ ೪.೪೫ ಎಕರೆ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಮಾರಾಟ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುತ್ತಿರುವ ಕಾನೂನು ಜಾರಿ ನಿರ್ದೇಶನಾಲಯ ಶುಕ್ರವಾರ ಬಂಗಾಳ ಹಾಗೂ ಜಾರ್ಖಂಡ್‌ನ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಮಾರಾಟ ಮಾಡಲಾಗಿದೆ ಎನ್ನಲಾದ ಈ ಪ್ರಕರಣದಲ್ಲಿ ರಾಂಚಿ ಹಾಗೂ ಕೊಲ್ಕತ್ತಾದ ಕೆಲ ಉದ್ಯಮಿಗಳು ಹಾಗೂ ಜಾರ್ಖಂಡ್ ಸರ್ಕಾರದ ಕೆಲ ಅಧಿಕಾರಿಗಳು ಷಾಮೀಲಾಗಿದ್ದಾರೆ ಎಂದು ಇಲಾಖಾ ತನಿಖೆಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ರಾಂಚಿ ಮಹಾನಗರ ಪಾಲಿಕೆ ಪೊಲೀಸರಿಗೆ ದೂರು ನೀಡಿತ್ತು. ಕಳೆದ ತಿಂಗಳು ಇ.ಡಿ. ಈ ಪ್ರಕರಣದ ವಿಚಾರಣೆ ಆರಂಭಿಸಿತ್ತು ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಂಗಾಳದ ಕೊಲ್ಕತ್ತಾ ಹಾಗೂ ಬಿಧಾನ್‌ನಗರ ಪ್ರದೇಶದಲ್ಲಿ ದಾಳಿ ನಡೆದಿದೆ. ಒಂದು ತಂಡ ಉದ್ಯಮಿ ಅಮಿತ್ ಅಗರ್ವಾಲ್ ಅವರ ಮನೆಯ ಮೇಲೆ ದಾಳಿ ನಡೆಸಿದರೆ ಇನ್ನೊಂದು ತಂಡ ಅವರ ಸಹೋದರ ಅಮರ್ ಅಗರ‍್ವಾಲ್ ಅವರ ಮನೆಯಲ್ಲಿ ಶೋಧ ನಡೆಸಿದೆ.  


ಪುತ್ತೂರಿನ ಹಲವೆಡೆ
ಎನ್‌ಐಎ ಶೋಧ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿರುವ ಪಿಎಫ್‌ಐ ಸಂಘಟನೆಗೆ ಸೇರಿದ ನಾಲ್ವರಿಗೆ ಕೆಲ ದಿನಗಳ ಹಿಂದೆಯಷ್ಟೇ ರಾಷ್ಟೀಯ ತನಿಖಾ ದಳ (ಎನ್‌ಐಎ) ದ ಅಧಿಕಾರಿಗಳು ಲುಕೌಟ್ ನೊಟೀಸ್ ಜಾರಿ ಮಾಡಿದ್ದರು. ಅಲ್ಲದೆ ಪುತ್ತೂರಿನ ಹಲವೆಡೆ ಶೋಧಕಾರ್ಯ ನಡೆಸಿದ್ದರು. ತನಿಖಾ ದಳದ ಅಧಿಕಾರಿಗಳು ಸುಳ್ಯ ತಾಲೂಕು ಬೆಳ್ಳಾರೆಯ ಬೂಡು ನಿವಾಸಿ ಮಹಮ್ಮದ್ ಮುಸ್ತಫಾ, ಮಡಿಕೇರಿ ನಿವಾಸಿ ತುಫೈಲ್ ಎಂ. ಎಚ್., ಸುಳ್ಯ ತಾಲೂಕು ಕಲ್ಲನೊಟ್ಟು ನಿವಾಸಿ ಉಮ್ಮರ್ ಫಾರೂಕ್ ಹಾಗೂ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಯಾನೆ ಪೈಂಟರ್ ಸಿದ್ದಿಕ್‌ರವರ ಪತ್ತೆಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಲುಕೌಟ್ ನೊಟೀಸ್ ಜಾರಿ ಮಾಡಿದ್ದರು. ಮುಹಮ್ಮದ್ ಮುಸ್ತಫಾ ಹಾಗೂ ತುಫೈಲ್ ಎಂ.ಎಚ್. ಪತ್ತೆಗೆ ತಲಾ ೫ ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದು ಉಳಿದಿಬ್ಬರ ಪತ್ತೆಗೆ ತಲಾ ೨ ಲಕ್ಷ ರೂ. ಬಹುಮಾನ ಪ್ರಕಟಿಸಲಾಗಿದೆ. ಇದರ ನಡುವೆ ಇದೀಗ ಎನ್‌ಐಎ ಅಧಿಕಾರಿಗಳು ಸುಳ್ಯ ಹಾಗೂ ಉಪ್ಪಿನಂಗಡಿಯಲ್ಲಿ ಎಸ್‌ಡಿಪಿಐ ಹಾಗೂ ಪಿಎಫ್‌ಐ ಮುಖಂಡರ ಮನೆಗೆ ದಾಳಿ ನಡೆಸಲಾಗಿದೆ.