ಪಿಎಫ್‍ಐ, ಎಸ್‍ಡಿಪಿಐ ನಿಷೇಧಕ್ಕೆ ಆಗ್ರಹಿಸಿ ಶ್ರೀರಾಮ್ ಸೇನೆ ಪ್ರತಿಭಟನೆ

ಕಲಬುರಗಿ,ಆ.5: ಭಾರತವನ್ನು 2047ರ ವೇಳೆಗೆ ಇಸ್ಲಾಮೀಕರಣಗೊಳಿಸುವ ಉದ್ದೇಶ ಹೊಂದಿರುವ ಪಿಎಫ್‍ಐ ಹಾಗೂ ಎಸ್‍ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಶ್ರೀರಾಮ್ ಸೇನೆಯ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಸಂವಿಧಾನ, ರಾಷ್ಟ್ರಧ್ವಜ ಮತ್ತು ದಲಿತರನ್ನು ಮುಂಚೂಣಿಯಲ್ಲಿ ಉಪಯೋಗಿಸಿ ಇಸ್ಲಾಂ ರಾಷ್ಟ್ರ ಘೋಷಿಸುವುದು, ಸಮಾಜ ದ್ರೋಹಕ್ಕಾಗಿ, ದೇಶ ದ್ರೋಹಕ್ಕಾಗಿ ಆಂತರಿಕ ಸೈನ್ಯದ ಶಕ್ತಿಯನ್ನು ಪಿಎಫ್‍ಐ ನಿರ್ಮಿಸಿದೆ ಎಂದು ಆರೋಪಿಸಿದರು.
ಕೇರಳ್ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಅಚ್ಯುತನ್ ಇಬ್ಬರೂ ಪಿಎಫ್‍ಐ ಭಯೋತ್ಪಾದಕ ಸಂಘಟನೆಗಳ ಸಂಪರ್ಕದಲ್ಲಿದ್ದ ಕಾರಣ ನಿಷೇಧ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ದೇಶದ ಪೌರತ್ವ ಕಾಯ್ದೆ, ರೈತರ ಹೋರಾಟ ಹಾಗೂ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹಿಂಸಾತ್ಮಕ ಕೃತ್ಯಗಳಲ್ಲಿ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳ ಪಾತ್ರವಿದೆ. 1947ರಲ್ಲಿ ಮುಸ್ಲಿಂ ಲೀಗ್ ದೇಶ ತುಂಡರಿಸಿ ಪಾಕ್ ನಿರ್ಮಿಸಿತ್ತು. ಈಗ ಪಿಎಸ್‍ಐ ಹಾಗೂ ಎಸ್‍ಡಿಪಿಐ ಭಾರತವನ್ನು ಇಸ್ಲಾಮೀಕರಣಗೊಳಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ದೇಶದ ಹಾಗೂ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಬಹುತೇಕ ಪಿಎಫ್‍ಐ ಹಾಗೂ ಎಸ್‍ಡಿಪಿಐ ಸಂಘಟನೆಗಳಿಂದ ಎಂಬುದು ರುಜುವಾತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ಪಿಎಫ್‍ಐ ಹಾಗೂ ಎಸ್‍ಡಿಪಿಐ ಸಿದ್ಧಪಡಿಸಿದ್ದು ಬಿಹಾರದಲ್ಲಿ ಬಯಲಾಗಿದೆ. ಜಗತ್ತಿನ ಬಹುತೇಕ ಮುಸ್ಲಿಂ ರಾಷ್ಟ್ರಗಳಿಂದ ಲಕ್ಷಾಂತರ ಕೋಟಿ ರೂ.ಗಳು ಪಿಎಫ್‍ಐ ಹಾಗೂ ಎಸ್‍ಡಿಪಿಐಗೆ ಜಮಾ ಆಗುತ್ತಿದೆ. ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಎಲ್ಲ ನಾಯಕರು, ಕಾಂಗ್ರೆಸ್ ನಾಯಕರು, ಮುಸ್ಲಿಂ, ಕಮ್ಯುನಿಸ್ಟ್, ಜೆಡಿಎಸ್ ನಾಯಕರು, ಅಖಿಲ ಭಾರತ ಮುಸ್ಲಿಂ ಸೂಫಿ ಸಂತರು ಇತ್ಯಾದಿಗಳವರು ಪಿಎಫ್‍ಐ ಹಾಗೂ ಎಸ್‍ಡಿಪಿಐ ನಿಷೇಧಿಸಲು ಒತ್ತಾಯಿಸಿದ್ದಾರೆ. ಕೂಡಲೇ ಎಲ್ಲ ಕಾರಣಗಳಿಂದಾಗಿ ಹಿಂದೂಗಳಿಗೆ ರಕ್ಷಣೆ ಕೊಡಲು ಪಿಎಫ್‍ಐ ಹಾಗೂ ಎಸ್‍ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಮಹೇಶ್ ಎಚ್. ಗೊಬ್ಬೂರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹೇಶ್ ಕೆಂಭಾವಿ, ಅಂಬಾರಾಯ್ ಕುಂಬಾರ್, ರಾಕೇಶ್ ಜಮಾದಾರ್ ಮುಂತಾದವರು ಪಾಲ್ಗೊಂಡಿದ್ದರು.