ಪಿಎನ್‍ಜಿ ಯೋಜನೆಗೆ ಸಂಸದ ಪ್ರತಾಪ್ ಸಿಂಹ ಚಾಲನೆ

ಮೈಸೂರು, ಜು.14:- ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸುನಂದಾ ಪಾಲನೇತ್ರ ನೇತೃತ್ವದಲ್ಲಿ ಇಂದು ಮೈಸೂರು ನಗರದಲ್ಲಿ ಪೈಪ್ ಲೈನ್ ಮೂಲಕ ಮನೆ-ಮನೆಗಳಿಗೆ ನೈಸರ್ಗಿಕ ಅಡುಗೆ ಅನಿಲ (ಪಿಎನ್‍ಜಿ) ಪೂರೈಸುವ ಬಹುನಿರೀಕ್ಷಿತ ಯೋಜನೆಯನ್ನು ಎಜಿ & ಪಿ ಕಂಪನಿಯ ವತಿಯಿಂದ ಕಾಮಗಾರಿಯನ್ನು ಕೈಗೊಂಡಿದ್ದು, ಮೈಸೂರು ನಗರದ ವಾರ್ಡ್ ನಂ-20ರ ವಿಜಯನಗರ 1ನೇ ಹಂತದಲ್ಲಿ ಸುಮಾರು 15 ಕಿ.ಮೀ ಪೈಪ್ ಲೈನ್ ಅಳವಡಿಸಲು 20 ಕೋಟಿರೂ.ಗಳ ಅಂದಾಜು ಮೊತ್ತ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಯೋಗನರಸಿಂಹಸ್ವಾಮಿ ದೇವಸ್ಥಾನದ ಎದುರು, ಜನರಲ್ ತಿಮ್ಮಯ್ಯ ರಸ್ತೆ ವಿಜಯನಗರ 1ನೇ ಹಂತ ಇಲ್ಲಿ ಇಂದು ನೆರವೇರಿಸಲಾಯಿತು.
ಈ ಸಂದರ್ಭ ಸಂಸದ ಪ್ರತಾಪ್ ಸಿಂಹ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದೇಶದಲ್ಲಿಯೇ ಮನೆಯಲ್ಲಿ ಟ್ಯಾಪ್ ತಿರುಗಿಸಿದಾಗ ನಲ್ಲಿಗಳಲ್ಲಿ ಹೇಗೆ ನೀರು ಬರತ್ತೋ ಅದೇ ರೀತಿ ಗ್ಯಾಸ್ ನಲ್ಲಿ ಅಡುಗೆ ಅನಿಲ ಬರಬೇಕು ಎಂಬ ಸಂಕಲ್ಪ ಮಾಡಿದ್ದರು. ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ 2018ರಲ್ಲಿ ಈ ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತಂದರು ಎಂದರು.
ಪ್ರಾರಂಭದಲ್ಲಿ ಯೋಜನೆಯನ್ನು ತಂದಾಗ ರಸ್ತೆಯನ್ನು ಅಗೆಯುತ್ತಾರೆ. ರಸ್ತೆ ಹಾಳಾಗುತ್ತದೆ ಎಂಬ ಆತಂಕ ಮೂಡಿತ್ತು. ಆದರೆ ಯೋಜನೆ ಬಗ್ಗೆ ಪಾಲಿಕೆಯ ಒಪ್ಪಿಗೆಯ ಪಡೆಯುವುದರ ಕುರಿತು ಮಾತ್ರ ಯೋಚನೆ ಮಾಡಿದ್ದೇವೆಯೇ ಹೊರತು ಆತಂಕವನ್ನು ದೂರ ಮಾಡುವಂತಹ ಕೆಲಸವನ್ನು ಯಾರೂ ಕೈ ಹಾಕಿರಲಿಲ್ಲ. ನನ್ನಿಂದಲೂ ಲೋಪವಾಗಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಒಂದಷ್ಟು ಗೊಂದಲ ಸೃಷ್ಟಿಯಾಗಿದ್ದರೂ ಕೂಡ ಶಾಸಕ ನಾಗೇಂದ್ರ ಜೊತೆ ಸೇರಿ ಉಪಯೋಗವೇನು ಎನ್ನುವ ಕುರಿತು ಚರ್ಚೆ ಮಾಡಿ ಕಂಪನಿಯವರಿಗೂ ಕೂಡ ಈ ರಸ್ತೆಯಲ್ಲಿ ಗುಂಡಿ ತೆಗೆದ ತಕ್ಷಣ ಮುಚ್ಚಿಸಬೇಕು ಎಂಬಿತ್ಯಾದಿ ಚರ್ಚೆ ನಡೆಸಿ 1956ರೂ.ಪ್ರತಿ ಮೀಟರ್ ಚಾರ್ಜ್ ನೀಡಿ, ಸರಿಯಾದ ಕಾಮಗಾರಿ ಮಾಡಿದರೆ ಮಾತ್ರ ಮುಂದಿನ ಹಂತದ ಒಪ್ಪಿಗೆ ನೀಡುತ್ತೇವೆ ಎಂದು ಹೇಳಿದ ನಂತರ ಚಾಮರಾಜ ಕ್ಷೇತ್ರದಲ್ಲಿ ಆರಂಭವಾಗಿದೆ.
ಪೈಪ್ ಲೈನ್ ಕಾಮಗಾರಿ ಸಂಪೂರ್ಣ ಮುಗಿದ ನಂತರ ಮನೆಮನೆಗೆ ಕನೆಕ್ಷನ್ ಕೊಡುವ ಕೆಲಸವಾಗಲಿದೆ. ಮುಂದಿನ ಚುನಾವಣೆಯೊಳಗಡೆ ಮನೆಮನೆಗೆ ಗ್ಯಾಸ್ ಸಂಪರ್ಕ ಸಿಗಲಿದ್ದು ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಿ ಚುನಾವಣೆಗೆ ತೆರಳಲಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭ ಪಾಲಿಕೆಯ ಸದಸ್ಯರಾದ ಸುಬ್ಬಯ್ಯ, ಶಿವಕುಮಾರ್, ಪಾಲಿಕೆಯ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.