ಪಿಎಂ-ಶ್ರೀ ಯೋಜನೆಯಡಿ ದೇಶಾದ್ಯಂತ 14 ಸಾವಿರ ಶಾಲೆ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅಸ್ತು

ನವದೆಹಲಿ,ಸೆ.7- ಪಿಎಂ-ಶ್ರೀ ಯೋಜನೆಯಡಿ 27,360 ಕೋಟಿ ರೂ.ವೆಚ್ಚದಲ್ಲಿ ದೇಶದಲ್ಲಿ 14 ಸಾವಿರಕ್ಕೂ ಹೆಚ್ಚು ಶಾಲೆಗಳ ನಿರ್ಮಾಣಕ್ಕೆ ಅನುದಾನ ಒದಗಿಸಲು ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಸಚಿವರಾದ ಧರ್ಮೇಂದ್ರ ಪ್ರಧಾನ್ ಹಾಗೂ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಪಿಎಂ-ಶ್ರೀ ಯೋಜನೆಯಡಿ ಕೇಂದ್ರೀಯ ಹಾಗೂ ನವೋದಯ ಹಾಗೂ ಸರ್ಕಾರಿ ಶಾಲೆಗಳನ್ನು ಬಲಪಡಿಸಲಾಗುತ್ತದೆ ಎಂದು ತಿಳಿಸಿದರು.
ಐದು ವರ್ಷಗಳ ಅವಧಿಯಲ್ಲಿ ನಿಗದಿತ ಸಂಖ್ಯೆಯ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಶಾಲೆಗಳ ನಿರ್ಮಾಣಕ್ಕೆ 27,360 ಕೋಟಿ ರೂ ವೆಚ್ಚವಾಗಲಿದೆ. ಈ ಪೈಕಿ ಕೇಂದ್ರ ಸರ್ಕಾರ 18,128 ಕೋಟಿ ಭರಿಸಲಿದೆ ಎಂದರು.
ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಮಹತ್ವದ ಯೋಜನೆಯನ್ನು ಘೋಷಿಸಿದ್ದರು. ಇದರಿಂದ 1.87 ಲಕ್ಷ ಯೋಜನೆಗಳಿಗೆ ಅನುಕೂಲವಾಗಲಿದೆ ಎಂದು ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಗತಿಶಕ್ತಿ ಕಾರ್ಯಕ್ರಮಕ್ಕೆ ರೈಲ್ವೆ ಭೂಮಿಯನ್ನು ಸುದೀರ್ಘ ಅವಧಿಗೆ ಗುತ್ತಿಗೆ ನೀಡುವ ನೀತಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
ಸದ್ಯ 5 ವರ್ಷದವರೆಗೆ ಭೂಮಿ ಗುತ್ತಿಗೆ ನೀಡುವ ವ್ಯವಸ್ಥೆ ಜಾರಿಯಲ್ಲಿತ್ತು. ಹೊಸ ನೀತಿಯ ಪ್ರಕಾರ ರೈಲ್ವೆ ಭೂಮಿಯನ್ನು 35 ವರ್ಷದವರೆಗೂ ಗುತ್ತಿಗೆ ಪಡೆಯಬಹುದಾಗಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದರು.