ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 67 ಲಕ್ಷ ರೈತರಿಗೆ 16 ಸಾವಿರ ಕೋಟಿ ನೆರವು: ಸಿಎಂ

ಬೆಂಗಳೂರು/ ಹಾವೇರಿ.ಮಾ.10- ಪ್ರಧಾನ್ ಮಂತ್ರಿ‌ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 67 ಲಕ್ಷ ರೈತ ಕುಟುಂಬಕ್ಕೆ ಕಳೆದ ನಾಲ್ಕು ವರ್ಷಗಳಲ್ಲಿ 16 ಸಾವಿರ ಕೋಟಿ ರೂಪಾಯಿ ತಲುಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ವರ್ಷ ಬಜೆಟ್ ನಲ್ಲಿ ರೈತರಿಗೆ 10 ಸಾವಿರ ನೀಡುವ ವಿನೂತನ ಯೋಜನೆ ರೂಪಿಸಲಾಗಿದೆ . ಸ್ತ್ರೀ ಸಾಮರ್ಥ್ಯ ಯೋಜನೆಯಡಿ 5 ಲಕ್ಷ ಮಹಿಳೆಯರಿಗೆ ಲಾಭವಾಗಲಿದೆ. ಪ್ರತಿ ವಾರ ಸ್ತ್ರೀ ಶಕ್ತಿ ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಹಾವೇರಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಗಾಟಿಸಿ ಮಾತನಾಡಿದ ಅವರು ಬ್ಯಾಂಕಿನವರೊಂದಿಗೆ ಸಂಪರ್ಕ ಸಾಧಿಸಿ ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ರೈತಾಪಿ ಮಹಿಳೆಯರಿಗೆ ಅವರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ. ನೀಡುವ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ ಎಂದರು.

40 ಲಕ್ಷ ವಿದ್ಯಾರ್ಥಿನಿಯರಿಗೆ ಪಾಸ್:

ರಾಜ್ಯದ 40 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ದುಡಿಯುವ ವರ್ಗಕ್ಕೆ ಬೆಂಬಲ
ಎಸ್ ಸಿ ಎಸ್ ಟಿ ಸಮುದಾಯಗಳಿಗೆ ಜಮೀನು ಖರೀದಿಗೆ 20 ಲಕ್ಷ, 75 ಯೂನಿಟ್ ಉಚಿತ ವಿದ್ಯುತ್, ಮನೆ ನಿರ್ಮಾಣಕ್ಕೆ 2 ಲಕ್ಷ, 33 ಸಾವಿರ ಎಸ್ ಸಿ, ಎಸ್ ಟಿ ಮಕ್ಕಳಿಗೆ ಅಧಿಕವಾಗಿ ಹಾಸ್ಟೆಲ್ ವ್ಯವಸ್ಥೆ, ವಿದ್ಯಾಸಿರಿ ಯೋಜನೆ, ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಸರ್ಕಾರ ಎಸ್ ಸಿ ಎಸ್ ಟಿ ಸಮುದಾಯಗಳ ಅಭಿವೃದ್ಧಿಯತ್ತ ತನ್ನ ಬದ್ಧತೆಯನ್ನು ತೋರಿದೆ ಎಂದು ಹೇಳಿದರು

ದಾವಣೆಗೆರೆಯಲ್ಲಿಯೂ ಬಂಜಾರ ಸೇರಿದಂತೆ ಹಲವು ಸಮುದಾಯಗಳ ಮನೆಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕುಶಲಕರ್ಮಿಗಳ ಅಭಿವೃದ್ಧಿಗೆ ಕಾಯಕ ಯೋಜನೆ ಯಡಿ 50 ಸಾವಿರ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ದುಡಿಯುವ ವರ್ಗಕ್ಕೆ ಬೆಂಬಲ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.

ರಾಜ್ಯದ ಜನ ಶ್ರೀಮಂತರಾಗಬೇಕು:

ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ಸಲುವಾಗಿ ಪ್ರಾಥಮಿಕ ಆರೋಗ್ಯಕೇಂದ್ರಗಳನ್ನು ಉನ್ನತೀಕರಿಸಲಾಗಿದೆ. ಡಯಾಲಿಸಿಸ್ ಸೈಕಲ್ಸ್ ಹೆಚ್ಚಳ, ಕ್ಯಾನ್ಸರ್ ಚಿಕಿತ್ಸೆ, ಕಿವುಡರಿಗೆ ಶ್ರವಣಸಾಧನ ಖರೀದಿಗೆ ನೆರವು ನೀಡಲಾಗುತ್ತಿದೆ. ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು.

2 ರಿಂದ 3 ಲಕ್ಷ ಯುವಕರಿಗೆ ಉದ್ಯೋಗಾವಕಾಶ ನೀಡಲಾಗುತ್ತಿದೆ. ಮಹಿಳೆಯರು ಹಾಗೂ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ. ರಾಜ್ಯದ ಜನ ಶ್ರೀಮಂತರಾದರೆ, ರಾಜ್ಯ ಶ್ರೀಮಂತವಾಗುತ್ತದೆ. ಜಿಲ್ಲೆಯಲ್ಲಿ ಜೋಳ, ಮೆಣಸಿನಕಾಯಿ ಸಂಸ್ಕರಣಾ ಘಟಕಗಳು, ಟೆಕ್ಸ್ ಟೈಲ್ ಪಾರ್ಕ್ , ನೀರಾವರಿ ಯೋಜನೆಗಳು, ಮಾವಿನ ಸಂಸ್ಕರಣಾ ಘಟಕಗಳು ಆಗುತ್ತಿವೆ. ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಶೀಘ್ರದಲ್ಲಿ ಉದ್ಘಾಟನೆಗೊಳಿಸಲಾಗುವುದು ಎಂದರು.