ಪಿಎಂ ಕಿಸಾನ್ ಯೋಜನೆ:೫೪ ಲಕ್ಷ ರೈತರ ಖಾತೆಗೆ ೧೫ ಸಾವಿರ ಕೋಟಿ ರೂ.ಜಮೆ

ರಾಯಚೂರು,ಏ.೧೮ – ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಪಿಎಂ ಕಿಸಾನ್ – ಕರ್ನಾಟಕ ಯೋಜನೆಯಡಿ ರಾಜ್ಯದ ೫೪ ಲಕ್ಷ ರೈತರ ಖಾತೆಗೆ ೧೫ ಸಾವಿರ ಕೋಟಿ ರೂ. ಜಮೆ ಮಾಡಿದೆ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಿದ್ದನಗೌಡ ನೇಳಹಾಳ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಡಬಲ್ ಇಂಜಿನ್ ಸರ್ಕಾರದಿಂದ ನೀರಾವರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಿಂದ ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನ ದೊರೆತಿದ್ದು,ಮೊದಲ ಕಂತಿನಲ್ಲಿ ಕೇಂದ್ರ ಸರ್ಕಾರ ೫,೩೦೦ ಕೋಟಿ ರೂ. ಘೋಷಿಸಿದೆ ರಾಜ್ಯದ ಜನರ ಬಹುಕಾಲದ ನೀರಾವರಿ ಬೇಡಿಕೆಯನ್ನು ಬಿಜೆಪಿ ಪಕ್ಷ ಪರಿಹರಿಸಿದೆ. ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಮಹಾದಾಯಿಯ ಒಂದು ಹನಿ ನೀರು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ,ಬಿಜೆಪಿ ೧,೦೦೦ ಕೋಟಿ ರೂ.ಗಳ ಹೊಸ ಆರ್ಥಿಕ ಬದ್ಧತೆಯೊಂದಿಗೆ ಕಳಸಾ ಬಂಡೂರಿ ಯೋಜನೆಯನ್ನು ಜಾರಿ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷ ರೈತರಿಗೆ ಭಾರಿ ಅನ್ಯಾಯ ಮಾಡಿದೆ. ಡಬಲ್ ಇಂಜಿನ್ ಬಿಜೆಪಿ ಸರ್ಕಾರವು ರೈತರ ನಿಜ ಸ್ನೇಹಿತ ಎಂದು ಸಾಬೀತಾಗಿದೆ.ಪಿಎಂ ಕಿಸಾನ್-ಕರ್ನಾಟಕ ಯೋಜನೆಯಡಿ ರಾಜ್ಯದ ೫೪ ಲಕ್ಷ ರೈತರ ಖಾತೆಗೆ ೧೫ ಸಾವಿರ ಕೋಟಿ ರೂ.ಜಮೆ ಮಾಡಿದೆ. ಇದೇ ಯೋಜನೆಗೆ ಕಾಂಗ್ರೆಸ್ ಪಕ್ಷವು ಅರ್ಹ ಫಲಾನುಭವಿಗಳಾಗಿ ಕೇವಲ ೧೭ ರೈತರ ಹೆಸರಿರುವ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸುವ ಮೂಲಕ ರಾಜ್ಯದ ರೈತರಿಗೆ ದ್ರೋಹ ಬಗೆದಿತ್ತು.ಇದರಿಂದ ರೈತರಿಗೆ ದೊರೆಯಬಹುದ್ದಾಗಿದ್ದ ೩,೨೦೦ ಕೋಟಿ ರೂ. ಕೈ ತಪ್ಪಿತು ಎಂದು ಆರೋಪಿಸಿದರು.
ಈಗ ನಮ್ಮ ರೈತರು ರಾಜ್ಯ ಸರ್ಕಾರದ ಹೆಚ್ಚುವರಿ ೪ ಸಾವಿರ ರೂ. ಜತೆಗೆ ಕೇಂದ್ರದ ೬ ಸಾವಿರ ಸೇರಿ ಒಟ್ಟು ೧೦,೦೦೦ ರೂ. ಪಡೆಯುತ್ತಿದ್ದಾರೆ.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಮೊದಲ ಕೃಷಿ ಬಜೆಟ್ ಮಂಡಿಸಿ,ಬಿಜೆಟ್ ಗಾತ್ರವನ್ನು ೪ ಪಟ್ಟು ಹೆಚ್ಚಿಸಿದ್ದರು.ರೈತರ ಪರವಾಗಿ ಇರುವುದು ಬಿಜೆಪಿಯೇ ಹೊರತು, ಕಾಂಗ್ರೆಸ್ ಅಲ್ಲ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ ಎಂದರು.
ಡಬಲ್ ಇಂಜಿನ್ ಸರ್ಕಾರವು ಭವಿಷ್ಯದ ದೃಷ್ಟಿಯಿಂದ ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಗ್ರೀನ್ ಹೈಡೋಜನ್ ವಲಯಕ್ಕೆ ಭಾರಿ ಉತ್ತೇಜನ ನೀಡಿದೆ. ಇದು ೨೦೨೨ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಗ್ರೀನ್ ಹೈಡೋಜನ್ ಮತ್ತು ಉತ್ಪನ್ನ ವಲಯದ ಹೂಡಿಕೆಗೆ ೨.೯ ಲಕ್ಷ ಕೋಟಿ ರೂ. ಸೇರಿದಂತೆ ಒಟ್ಟಾರೆಯಾಗಿ ೯.೮೧ ಲಕ್ಷ ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಪ್ರಸ್ತಾವನೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದರು.