ಪಿಇಎಸ್ ವಿದ್ಯಾರ್ಥಿ ಆತ್ಮಹತ್ಯೆ, ತನಿಖೆಗೆ ಆಗ್ರಹ

ಬೆಂಗಳೂರು, ಜು.೨೩- ನಗರದ ಪಿಇಎಸ್ ಕಾಲೇಜಿನ ಮಾನವಿಕ ವಿಜ್ಞಾನ ವಿಭಾಗದ ವಿದ್ಯಾರ್ಥಿ ಆದಿತ್ಯಾ ಪ್ರಭು ಆತ್ಮಹತ್ಯೆ ಪ್ರಕರಣ ಸಂಬಂಧ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಪೋಷಕರು ಪಟ್ಟು ಹಿಡಿದಿದ್ದಾರೆ.

ನಗರದಲ್ಲಿಂದು ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ಆದಿತ್ಯಾ ಪ್ರಭು ಪೋಷಕರು, ಸ್ನೇಹಿತರು, ಈತ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯಲ್ಲ. ಸಾವಿಗೆ ಬೇರೆಯೇ ಕಾರಣ ಇರಬಹುದು. ಕಾಲೇಜು ಆಡಳಿತ ಮಂಡಳಿ ವಿರುದ್ಧ ಮೊಕದ್ದಮೆ ದಾಖಲಿಸಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ
ಆದಿತ್ಯಾ ಪ್ರಭು ತಂದೆ ಗಿರೀಶ್ ಪ್ರಭು, ಸಾವಿನ ಪ್ರಕರಣದಲ್ಲಿ ಯಾರು ಭಾಗಿಯಾದ್ದಾರೆ ಅವರ ಮೇಲೆ ಕ್ರಮ ಆಗಬೇಕು. ಕಾಲೇಜಿನ ಆಡಳಿತ ಮಂಡಳಿಗಳ ಮಾರ್ಗಸೂಚಿ ಬದಲಾಗಬೇಕು.ತಪ್ಪು ಮಾಡಿದವರನ್ನ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಇಂತಹ ಗಂಭೀರ ಪ್ರಕರಣದ ಬಗ್ಗೆ ಡಿಸಿಪಿಯವನರನ್ನು ಭೇಟಿಯಾಗಿ ದೂರು ಕೊಟ್ಟಿದ್ದೇವೆ. ಪೊಲೀಸ್ ತನಿಖೆ ನಡೆಯುತ್ತಿದೆ ನಿಜಾಂಶ ಹೊರಬರಬೇಕು.
ಘಟನೆ ಬಳಿಕ ಕಾಲೇಜಿನಿಂದ ನಮಗೆ ಯಾವುದೇ ರೀತಿ ಪ್ರತಿಕ್ರಿಯೆ ಬಂದಿಲ್ಲ.
ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಪತ್ರಿಕಾ ಪ್ರಕಟಣೆ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಆದಿತ್ಯ ಒಳ್ಳೆ ವಿದ್ಯಾರ್ಥಿ, ಉನ್ನತ ವ್ಯಾಸಂಗದ ಆಸೆ ಹೊಂದಿದ್ದ.ಈತ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ಹೊಂದಿಲ್ಲ ಎಂದು ವಿದ್ಯಾರ್ಥಿ ಆದಿತ್ಯ ಪ್ರಭು ತಾಯಿ ಆಶಾ ಅಳಲು ತೋಡಿಕೊಂಡರು.

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾದ ಕೂಗು..!

justiceforadityaprabhu ಎಂದು ಹ್ಯಾಷ್ ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲೂ ಸಾವಿರಾರು ಮಂದಿ ಆದಿತ್ಯಾ ಪ್ರಭು ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

ಯಾರು ಆದಿತ್ಯಾ ಪ್ರಭು?

ಮಂಗಳೂರಿನ ಆದಿತ್ಯ ಪ್ರಭು, ಪಿಇಎಸ್ ಕಾಲೇಜಿನ ಮಾನವಿಕ ವಿಜ್ಞಾನ ವಿಭಾಗದಲ್ಲಿ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದರು. ಕಳೆದ ಸೋಮವಾರ ಪರೀಕ್ಷೆಗೆ ಅವರು ಹಾಜರಾಗಿದ್ದರು.

ಆದರೆ, ಪರೀಕ್ಷೆ ಸಂದರ್ಭದಲ್ಲಿ ನಕಲು ಮಾಡಲು ಮೊಬೈಲ್ ಬಳಸುತ್ತಿದ್ದರು. ಅದನ್ನು ನೋಡಿದ್ದ ಮೇಲ್ವಿಚಾರಕ, ಮೊಬೈಲ್ ಕಸಿದುಕೊಂಡಿದ್ದರು. ನಂತರ, ಆದಿತ್ಯಾ ಜೊತೆ ಕಾಲೇಜಿನ ಶಿಕ್ಷಕರು ಆಪ್ತ ಸಮಾಲೋಚನೆ ನಡೆಸಿದ್ದರು. ನಕಲು ಮಾಡಿದ್ದ ಸಂಗತಿಯನ್ನು ಪೋಷಕರಿಗೆ ತಿಳಿಸುವುದಾಗಿ ಆದಿತ್ಯಾ ಅವರಿಗೆ ಹೇಳಿದ್ದರು ಇದರಿಂದ ಗಬರಿಗೊಂಡ ಆದಿತ್ಯಾ, ಕೊಠಡಿಯಿಂದ ಹೊರಗೆ ಓಡಿ ಬಂದು ಕಾಲೇಜು ಕಟ್ಟಡದ ೮ನೇ ಮಹಡಿಯಿಂದ ಜಿಗಿದಿದ್ದರು. ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಈ ಸಾವಿನ ಹಿಂದೆ ಆಡಳಿತ ಮಂಡಳಿಯ ವೈಫಲ್ಯ ಇದೆ ಎಂದು ಪೋಷಕರು ಆರೋಪಿಸಿದ್ದಾರೆ.