ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ

ದಾವಣಗೆರೆ.ಜ.೨; ನದಾಫ್-ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಇನ್ನಿತರೇ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ನದಾಫ್-ಪಿಂಜಾರ ಸಂಘ ಜಿಲ್ಲಾ ಘಟಕದ ವತಿಯಿಂದ ಸಂಘದ ಜಿಲ್ಲಾಧ್ಯಕ್ಷ ಜೆ.ಹೆಚ್. ಉಕ್ಕಡಗಾತ್ರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಸಮಾಜವು ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದೆ. ಈ ಸಮಾಜದ ಅಭಿವೃದ್ಧಿಗೆ ಈಗಾಗಲೇ ಸರ್ಕಾರದ ಗಮನ ಸೆಳೆದರು. ಯಾವುದೇ ಕ್ರಮ ಜರುಗಿಸಿಲ್ಲ.ಸಂಘದ ಪ್ರಮುಖ ಬೇಡಿಕೆಯಾದ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಮಾಡಿದ್ದಲ್ಲಿ ಅಭಿವೃದ್ಧಿ ಕಾಣಬಹುದು. ಇದಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ. ಪಿಂಜಾರ ಸಮಾಜವು ಪ್ರವರ್ಗ-1ರಲ್ಲಿ ಸೇರ್ಪಡೆಯಾಗಿದ್ದು, ಸದರಿ ದೃಢೀಕರಣ ಪತ್ರ ಪಡೆದುಕೊಳ್ಳುವಲ್ಲಿ ಅಧಿಕಾರಿಗಳಿಂದ ತೊಂದರೆ ಅನುಭವಿಸಲಾಗುತ್ತಿದೆ. ಸರ್ಕಾರದಿಂದ ಲಭ್ಯವಾಗ ಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಈ ವಿಚಾರವಾಗಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ವಾಸ್ತವ ಪರಿಸ್ಥಿತಿಯನ್ನು ಮಾಡಿಕೊಟ್ಟರು ಸಕಾರಾತ್ಮಕ ಕ್ರಿಯೆ ಆಗಿಲ್ಲ. ಇನ್ನಾದರೂ ಸರ್ಕಾರ ಈ ಬಗ್ಗೆ ಅಧಿಕಾರಿಗಳಿಗೆ ಸ್ಪಂಧಿಸುವಂತೆ ಕೋರಲಾಗಿದೆ. ಸರ್ಕಾರ ಈ ಬೇಡಿಕೆಗಳನ್ನು ಜನವರಿ 15 ರೊಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ಜನವರಿ 20 ರಂದು ರಾಜ್ಯಾಧ್ಯಂತ ಸಾಂಕೇತಿಕವಾಗಿ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಅನ್ವರ್ ಹುಸೇನ್, ಎ.ಫಕೃದ್ಧೀನ್, ಚನ್ನಗಿರಿ ತಾಲ್ಲೂಕು ಅಧ್ಯಕ್ಷ ಇಸ್ಮಾಯಿಲ್ ಸಾಬ್, ಅಯಾಜ್ ಹುಸೇನ್, ಅತಾವುಲ್ಲಾ, ಮುನೀರ್ ಮುಂತಾದವರು ಇದ್ದರು.