
ಹುಬ್ಬಳ್ಳಿ,ಮಾ.16: ಹೆಚ್ಚಿನ ಪಿಂಚಣಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್ 95-ನಿವೃತ್ತ ಉದ್ಯೋಗಿಗಳು, ಇಪಿಎಸ್ ರಾಷ್ಟ್ರೀಯ ಸಂಘರ್ಷ ಸಮಿತಿ ವತಿಯಿಂದ ಬುಧವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಸಮಿತಿ ಸದಸ್ಯ ವಿಲಾಸ ಕುಲಕರ್ಣಿ ಮಾತನಾಡಿ, ಕಮಾಂಡರ್, ಅಶೋಕ ರಾವತ್ ಮತ್ತು ವೀರೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 30-35 ವರ್ಷ ಸೇವೆ ಸಲ್ಲಿಸಿರುವ ನಮಗೆ ಮಾಸಿಕ 2 ಸಾವಿರ ಮಾತ್ರ ಪಿಂಚಣಿ ದೊರೆಯುತ್ತಿದೆ. ಪ್ರಸ್ತುತ ದಿನಮಾನದಲ್ಲಿ ಆ ಹಣ ಬದುಕು ಸಾಗಿಸಲು ಸಾಲುತ್ತಿಲ್ಲ. ಪಿಂಚಣಿ ಹೆಚ್ಚಳಕ್ಕೆ ಸಾಕಷ್ಟು ಬಾರಿ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕನಿಷ್ಠ ಮಾಸಿಕ 7,500 ಪಿಂಚಣಿ ಹಾಗೂ ಸರ್ಕಾರ ನೀಡುವ ವಿವಿಧ ಸೌಲಭ್ಯಗಳನ್ನು ನೀಡಬೇಕು. ಪಿಂಚಣಿದಾರ ಮೃತಪಟ್ಟ ಬಳಿಕ ಕುಟುಂಬಸ್ಥರಿಗೆ ಪಿಂಚಣಿಯ ಶೇ 50ರಷ್ಟು ನೀಡಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು. ಸಂಜೀವ ಕೌಜಲಗಿ, ವೆಂಕಟೇಶ ಮುರ್ಡೇಶ್ವರ, ರವೀಂದ್ರ ರಾಮದುರ್ಗಕರ ಮತ್ತಿತರರು ನೇತೃತ್ವ ವಹಿಸಿದ್ದರು.