ಪಿಂಚಣಿ ಸ್ಥಗಿತ: ಕಂಗಾಲಾದ ವಿಕಲಚೇತನ ಯುವಕ

ಸಂಜೆವಾಣಿ ವಾರ್ತೆ
ಹನೂರು ಜೂ 8 :- ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ಕಾಲು ಕಳೆದುಕೊಂಡ ವಿಕಲ ಚೇತನ ಯುವಕನಿಗೆ ಸರ್ಕಾರದಿಂದ ಬರುವ ಪಿಂಚಣಿ ಹಣದಿಂದ ವಂಚಿತನಾಗಿ ಆರ್ಥಿಕವಾಗಿ ಹಿಂದುಳಿದು ಕುಟುಂಬ ಜೀವನ ಸಾಗಿಸಲು ಏನು ವ್ಯವಸ್ಥೆ ಇಲ್ಲದೆ ಕಂಗಾಲಾಗಿ ಕಣ್ಣೀರು ಹಾಕುವ ಪರಿಸ್ಥಿತಿಯಲ್ಲಿ ಬದುಕು ಕಷ್ಟದಲ್ಲಿ ಸಾಗುತ್ತಿದೆ.
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದನ ಪಾಳ್ಯ ಗ್ರಾಮದ ನಿವಾಸಿ ಭಾಸ್ಕರ್ ಡಿಸೋಜಾ ಕುಮಾರ್ (34) ಎಂಬ ವಿಕಲ ಚೇತನ ಯುವಕ ತನ್ನ ಬಲಗಾಲನ್ನು ಕಳೆದುಕೊಂಡು ತಾಯಿ ಅಣ್ಣನ ಆಸರೆಯಲ್ಲಿ ಬದುಕುವ ಈತನಿಗೆ ಪಿಂಚಣಿಯ ಸೌಲಭ್ಯ ಸಿಗಬೇಕಾಗಿದೆ.
ಭಾಸ್ಕರ್ ಡಿಸೋಜಾ ಕುಮಾರ್ ಕಳೆದ ಏಳು ವರ್ಷಗಳ ಹಿಂದೆ ಬೈಕ್ ರಸ್ತೆ ಅಪಘಾತದಿಂದ ತನ್ನ ಬಲಗಾಲನ್ನು ಕಾಲು ಕಳೆದುಕೊಂಡಿದ್ದಾನೆ. ಇವಾಗ ಮರದ ಕಾಲಿನಲ್ಲಿ ಸ್ವಲ್ಪಮಟ್ಟಿಗೆ ತಿರುಗಾಡುತ್ತಾ ಹೆಚ್ಚಿನ ಒತ್ತಡ ಕೆಲಸ ಮಾಡಲು ಆಗದೆ. ಕಲ್ಲು ಕ್ವಾರೆಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತ ಸಿಗುವ ಹಣದಿಂದ ಜೀವನ ನಡೆಸುತ್ತಿದ್ದಾನೆ.
ಒಂದು ಕಾಲನ್ನು ಕಳೆದುಕೊಂಡ ನಂತರದ ದಿನಗಳಲ್ಲಿ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಾಗ ಈತನಿಗೆ ಪಿಂಚಣಿ ಹಣ ಬರುವಂತ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ತಿಂಗಳು ಪಿಂಚಣಿ ಹಣ ತಲುಪುತ್ತಿತ್ತು. ಮೂರು ವರ್ಷಗಳ ತನಕ ಪಿಂಚಣಿ ಹಣ ಬರುತ್ತಿತ್ತು ನಂತರದ ದಿನಗಳಲ್ಲಿ ಒಂದು ವರ್ಷದಿಂದ ಪಿಂಚಣಿ ಹಣ ಬರುತ್ತಿಲ್ಲ ಇದರಿಂದ ನನಗೆ ತುಂಬಾ ಕಷ್ಟವಾಗಿದೆ ಎಂದು ತನ್ನ ನೋವನ್ನು ಹಂಚಿಕೊಂಡಿದ್ದಾನೆ.
ಪ್ರತಿ ತಿಂಗಳು ಪಿಂಚಣಿ ಹಣ 1200 ರೂ. ಬರುತ್ತಿತ್ತು ಇದರಿಂದ ಹೇಗೋ ಮನೆಯಲ್ಲಿನ ಸಣ್ಣಪುಟ್ಟ ಖರ್ಚಿಗೆ ನನ್ನ ಆರೋಗ್ಯ ಸಮಸ್ಯೆ ಖರ್ಚನ್ನು ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದೆವು. ಆದರೆ ಈಗ ಪಿಂಚಣಿ ಹಣವು ಬರುತ್ತಿಲ್ಲ. ಈ ಬಗ್ಗೆ ಅಂಚೆ ಕಚೇರಿಯಲ್ಲಿ ಕೇಳಿದರೆ ನಿಮ್ಮ ಹಣ ನಿಂತುಹೋಗಿದೆ ಬರುತ್ತಿಲ್ಲ ಎಂದು ಹೇಳುತ್ತಾರೆ.
ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಗೊತ್ತಿಲ್ಲ ಕಾಲು ಕಳೆದುಕೊಂಡಿರುವ ನನಗೆ ಎಲ್ಲೂ ಓಡಾಡಿಕೊಂಡು ಯಾರನ್ನು ವಿಚಾರಿಸಲು ನನಗೆ ಆಗುತ್ತಿಲ್ಲ ನಮ್ಮ ತಂದೆ ನಾನು ಚಿಕ್ಕವನಾಗಿದ್ದಾಗಲೇ ನಿಧನರಾಗಿದ್ದಾರೆ ನನ್ನ ತಾಯಿ ಕೂಲಿ ಮಾಡಿಕೊಂಡು ಬಂದು , ನನ್ನನ್ನು ಸಾಕುತ್ತಿದ್ದಾರೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ವಿಕಲಚೇತನ ಯುವಕನಿಗೆ ಅಂಚೆ ಕಚೇರಿಯ ಮೂಲಕ ಬರುತ್ತಿದ್ದ 1200 ರೂ. ಪಿಂಚಣಿ ಹಣ ಬರುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಹೆಚ್ಚಿನ ಹಣ ಬರುವಂತ ವ್ಯವಸ್ಥೆ ಕಲ್ಪಿಸಿ ಸರ್ಕಾರದಿಂದ ಸಿಗುವ ಇನ್ನಿತರ ಸೌಲಭ್ಯಗಳನ್ನು ತಲುಪಿಸುವ ಮೂಲಕ ಈ ಬಡ ಕುಟುಂಬದ ಯುವಕನ ನೋವಿಗೆ ಸ್ಪಂದಿಸಲು ಮುಂದಾಗಬೇಕಾಗಿದೆ.