ಪಿಂಚಣಿ ವಂಚಿತ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರಿಂದ ಕರಾಳ ದಿನವಾಗಿ ಸಂಕ್ರಾಂತಿ ಹಬ್ಬ ಆಚರಣೆ

ಕಲಬುರಗಿ,ಜ 8:ಸೇವಾ ಭತ್ಯೆ ಒದಗಿಸುವಂತೆ ಹಾಗೂ ಪಿಂಚಣಿ ಸೌಲಭ್ಯ ಕೊಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನ ಫ್ರೀಡಮ್ ಪಾಕ್ ್ನಲ್ಲಿ ಆರಂಭಿಸಿರುವ ಧರಣಿ ಸತ್ಯಾಗ್ರಹ 94 ದಿನಗಳಲ್ಲಿ ಮುಂದುವರೆದರೂ ಸಹ ರಾಜ್ಯ ಸರ್ಕಾರವು ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಹಾಗಾಗಿ ಸಂಕ್ರಾಂತಿ ಹಬ್ಬವನ್ನು ಕರಾಳ ದಿನವನ್ನಾಗಿ ಆಚರಿಸಲಾಗುವುದು ಎಂದರು ಕರ್ನಾಟಕ ರಾಜ್ಯ ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಸಂತೋಷ್ ಖಾನಾಪುರೆ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ಹೋರಾಟಗಾರರಿಗೆ ನೀಡಿದ ಭರವಸೆ ಹುಸಿಯಾಗಿದ್ದು, ಇದರಿಂದಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸದೇ ಕರಾಳ ದಿನವನ್ನಾಗಿ ಮಾಡಿ ಬೆಂಗಳೂರಿನ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಭಾಗವಹಿಸುವರು ಎಂದರು.
ಕಲ್ಯಾಣ ಕರ್ನಾಟಕ ಭಾಗದಿಂದ ಸುಮಾರು 25 ಬಸ್‍ಗಳ ಮೂಲಕ ಬೆಂಗಳೂರಿನ ಪ್ರತಿಭಟನೆಯಲ್ಲಿ ನೌಕರರು ಭಾಗವಹಿಸುವರು. ರಾಜ್ಯಾದ್ಯಂತ ಸುಮಾರು 60000 ನೌಕರರು ಪಾಲ್ಗೊಳ್ಳುವರು. ಒಂದು ವೇಳೆ ಅದಕ್ಕೂ ಸರ್ಕಾರ ಸ್ಪಂದಿಸದೇ ಹೋದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಮುಖಂಡರಾದ ಡಾ. ಪಿ.ಎಸ್. ಕೊಕಟನೂರ್ ಅವರು ಮಾತನಾಡಿ, 2003 ಮತ್ತು 2006ರಲ್ಲಿ ಅನುದಾನಿತ ಶಾಲಾ, ಕಾಲೇಜುಗಳ ಶಿಕ್ಷಕರ, ಪ್ರಾಧ್ಯಾಪಕರ ಮತ್ತು ಬೋಧಕರಿಗೆ ಸೇವಾ ಭತ್ಯೆ ಮತ್ತು ನಿವೃತ್ತಿ ಹೊಂದಿದವರಿಗೆ ಹಾಗೂ ಮರಣ ಹೊಂದಿದವರಿಗೆ ಪಿಂಚಣಿ ಕೊಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದರೂ ಸಹ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಹೋರಾಟವನ್ನು ಇನ್ನಷ್ಟು ಪ್ರಖರಗೊಳಿಸಲಾಗುವುದು. ಬೆಂಗಳೂರಿನ ಧರಣಿ ಸತ್ಯಾಗ್ರಹಕ್ಕೆ ಜಿಲ್ಲೆಯಿಂದ ಸುಮಾರು 12 ಬಸ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಕೇವಲ ನೌಕರರು ಅಷ್ಟೇ ಅಲ್ಲ, ಕುಟುಂಬಸ್ಥರೂ ಸಹ ಹೋರಾಟದಲ್ಲಿ ಪಾಲ್ಗೊಳ್ಳುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾ ಮಾಗಣಗೇರಿ, ಸೂರ್ಯಕಾಂತ್ ಪಿ.ಜೆ., ಮಲ್ಲಿಕಾರ್ಜುನ್ ಡೊಣ್ಣೂರ್, ಬಿ.ಜಿ. ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.