ಪಿಂಚಣಿಗಾಗಿ ಕುಟುಂಬ ಸಮೇತ ಅನುದಾನಿತ ನೌಕರನ ಪ್ರತಿಭಟನೆ


ನರಗುಂದ,ಆ.1- ಕೊರೊನಾ ಇರುವ ಹಿನ್ನೆಲೆಯಲ್ಲಿ ಪಿಂಚಣಿ ವಂದತಿ ಅನುದಾನಿತ ನೌಕರರು ಪಿಂಚಣಿ ಹಾಗೂ ಇನ್ನಿತರ ಸೌಲಭ್ಯ ನೀಡುವಂತೆ ಆಗ್ರಹಿಸಿ ‘ ಸ್ಟ್ರೈಕ್ ಫುಮ್ ಹೋಂ’ ಕರ್ತವ್ಯದ ಜೊತೆ ಮನೆಯಿಂದಲೇ ಕಳೆದ 5ದಿನಗಳಿಂದ ಪ್ರತಿಭಟನೆ ಪ್ರಾರಂಭಿಸಿದ್ದು ಪ್ರತಿಭಟನೆಯು ಪಟ್ಟಣದ ಜೋತೆನ್ನವರ ಪ್ರೌಢಶಾಲೆಯ ಗ್ರುಪ್ ಡಿ. ನೌಕರ, ಭೀಮಪ್ಪ ಮಾದರ ತನ್ನ ಕುಟುಂಬದ ಸಮೇತ ವಿನೂತನ ಪ್ರತಿಭಟನೆ ಕೈಗೊಂಡಿದ್ದಾನೆ.
” ಪಿಂಚಣಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ” ಪಿಂಚಣಿ ಕೊಡಿ ಇಲ್ಲವೇ ವಿಷ ಕೊಡಿ ಎಂಬ ನಾಮ ಫಲಕದೊಂದಿಗೆ ಕಳೆದ 5 ದಿನಗಳಿಂದ ಪ್ರತಿಭಟನೆ ಕೈಗೊಂಡಿರುವ ಮಾದರ 2006ರ ನಂತರ ಸೇವೆಗೆ ಸೇರಿದ ಅನುದಾನಿತ ನೌಕರರಿಗೆ ಪಿಂಚಣಿ ಇಲ್ಲ. ವೈದ್ಯಕೀಯ ಸೌಲಭ್ಯವೂ ಇಲ್ಲ. ಕನಿಷ್ಟ ಪಕ್ಷ ಸರಕಾರಿ ನೌಕರರಿಗೆ ಇರುವ ನೂತನ ಪಿಂಚಣಿ ಯೋಜನೆಯೂ ಇಲ್ಲ. ಸರಕಾರದ ಈ ಮಲತಾಯಿ ಧೋರಣೆಯಿಂದ ಸಾವಿರಾರು ನೌಕರರು ಸೇವನೆಯಲ್ಲಿರುವಾಗಲೇ ಅಕಾಲಿಕ ಮರಣ ಹೊಂದಿದ್ದಾರೆ. ಹಲವರು, ಈಗಾಗಲೇ ತಿಂಗಳ ಕೊನೆಯ ಸಂಬಳ ಪಡೆದುಕೊಂಡು ಬಿಡಿಗಾಸು ಇಲ್ಲದೆ ಬರಿಗೈಯ್ಯಲ್ಲಿ ನಿವೃತ್ತ ಹೊಂದಿದ್ದಾರೆ. ಇಂಥಹ ನೌಕರ ಕುಟುಂಬಗಳು ಬೀದಿಗೆ ಬಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಎಂದು ನೋವು ತೋಡಿಕೊಂಡರು.
ನಿವೃತ್ತಿಯ ನಂತರ ಸಂಧ್ಯಾ ಕಾಲದ ಬದುಕಿಗೆ ಆಸರೆಯಾಗಬೇಕಾದ ಪಿಂಚಣಿಯೇ ಇಲ್ಲದಿದ್ದರೆ ಅನುದಾನಿತ ನೌಕರನ ಕುಟುಂಬ ಬದುಕುವುದು ಹೇಗೆ ಎಂದು ಪ್ರಶ್ನಿಸಿದ ಅವರು ಬೇರೆ ರಾಜ್ಯಗಳಲ್ಲಿ ಈ ತಾರತಮ್ಯವಿಲ್ಲ ನಮ್ಮ ರಾಜ್ಯದಲ್ಲಿ ಮಾತ್ರ ಅನುದಾನಿತ ನೌಕರರನ್ನು 2ನೇ ದರ್ಜೆಯ ಪ್ರಜೆಗಳಂತೆ ಸರಕಾರ ಕಾಣುತ್ತಿದೆ ಕೂಡಲೇ ಈ ತಾರತಮ್ಯ ಸರಿಪಡಿಸಿ ನಮ್ಮ ಬೇಡಿಕೆ ಇಡೇರಿಸಬೇಕು ಇಲ್ಲವಾದರೆ ನಮ್ಮ ಹೋರಾಟ ಜನಾಂದೋಲನವಾಗಿ ರೂಪಗೊಳ್ಳುವಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.