ಪಾಸ್ವಾನ ತಂಡದ ಹೇಳಿಕೆ ಬಾಲಿಶತನದ್ದು

ಬೀದರ್: ಜು.25:ಶನಿವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಬೇಡ ಜಂಗಮರ ವಿರೂದ್ಧ ಪದೆ ಪದೆ ಅಪ ಪ್ರಚಾರ ಮಾಡಲು ಹೊರಟಿರುವ ಮುಖಂಡ ಬಾಬು ಪಾಸ್ವಾನ ಹಾಗೂ ಅವರ ಟೀಮ್ ದಲಿತ ಸಂಘಟನೆ ಹೆಸರು ಹೇಳಿಕೊಂಡು ನಿಷ್ಟಾವಂತ ದಲಿತ ಸಮುದಾಯಕ್ಕೆ ಮಸಿ ಬಳೆಯುವ ಪ್ರಯತ್ನ ಸರಿಯಿಲ್ಲವೆಂದು ಅಖಿಲ ಕರ್ನಾಟಕ ಬೇಡ ಜಂಗಮ ಹೋರಾಟ ಸಮಿತಿಯ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು ಈ ತಿಂಗಳ 28ರಂದು ಬೆಂಗಳೂರಿನ ಫ್ರೀಡಂ ಪಾಕ್ರ್ನಲ್ಲಿ ಬೇಡ ಜಂಗಮರ ವಿರುದ್ಧ ಹೋರಾಟಕ್ಕಿಳಿದಿರುವ ಕ್ರಮ ಬಾಲಿಶದಿಂದ ಕೂಡಿದೆ ಎಂದು ಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಇತ್ತೀಚೆಗೆ ರಾಜ್ಯದ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಬೇಡ ಜಂಗಮರ ಬೃಹತ್ ಪ್ರತಿಭಟನಾ ಸ್ಥಳಕ್ಕೆ ಬಂದು ಸಣ್ಣ ಪುಟ್ಟ ಗೊಂದಲಗಳನ್ನು ನಿವಾರಿಸಿ ನಿಮಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿರುವ ಹಾಗೂ ಇತ್ತೀಚೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೇಡ ಜಂಗಮರ ಹೋರಾಟ ನ್ಯಾಯಯುತವಾಗಿದ್ದು ಇದಕ್ಕೆ ಪ್ರತಿ ಪಕ್ಷಗಳು ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿಕೆ ನೀಡಿರುವುದು ನಿಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಚಿತ್ರದುರ್ಗದ ಮುರುಘಾ ಶರಣರು ಬೇಡ ಜಂಗಮರ ಪರವಾಗಿ ಬೆಂಬಲ ಸೂಚಿಸಿದರೆ ಅದು ನಿಮಗೆ ನೋವಾಗಿತ್ತಿದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ.

ಪತ್ರಿಕೆ ಹೇಳಿಕೆಯಲ್ಲೂ, ಮನವಿ ಪತ್ರದಲ್ಲಿಯೂ, ಪತ್ರಿಕಾಗೋಷ್ಠಿಗಳಲ್ಲೂ ಪದೇ ಪದೆ ಮೀಸಲಾತಿ ಬಗ್ಗೆ ಮಾತನಾಡುವ ನೀವು ನಿಮಗೇ ಮೀಸಲಾತಿ ಗುತ್ತಿಗೆ ಕೊಡಲಾಗಿದೆಯೇ? ಸಂವಿಧಾನ ಮತ್ತು ದೇಶದ ಕಾನೂನು ಗುತ್ತಿಗೆ ತೆಗೆದುಕೊಂಡಿದ್ದೀರಾ? ಬೇಡ ಜಂಗಮ ಪ್ರಮಾಣ ಪತ್ರ ಸತ್ಯ ನೈಜವಾಗಿದೆ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಕೊಟ್ಟ ಸಾಂವಿಧಾನಿಕ ಹಕ್ಕು. ಅದು ಜನ್ಮಸಿದ್ದ ಹಕ್ಕು ನಮ್ಮದು ಕೇಳುತ್ತಿದ್ದೇವೆ. ನೀವು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರಿಗಿಂತ ದೊಡ್ಡವರಾ? ಅಥವಾ ರಾಷ್ಟ್ರಪತಿಯವರು ಸಂವಿಧಾನದಲ್ಲಿಯೇ ಜಂಗಮರಿಗೆ 19ನೇ ಯಾದಿಯಲ್ಲಿ ಕೊಟ್ಟಿರುವ ಹಕ್ಕು ಸುಳ್ಳು ಇದೆಯಾ?, ಹಾಗಾದರೆ ನೀವು ರಾಷ್ಟ್ರಪತಿಯವರಿಗಿಂತ ದೊಡ್ಡವರಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಸ್ವಾಮಿ ಅವರು, ದಮ್ ಇದ್ದರೆ, ದಾಖಲೆ ಹಿಡಿದುಕೊಂಡು ಮಾತನಾಡಬೇಕು. ತಾಕತ್ತಿದ್ದರೆ ನ್ಯಾಯಾಲಯದಲ್ಲಿ ದಾಖಲೆ ಹಾಜರು ಮಾಡಿ, ಸಾಕ್ಷಿ ಕೊಟ್ಟು ನಾವು ಬೇಡಜಂಗಮರು ಅಲ್ಲ ಅಂತ ಸಾಬೀತು ಮಾಡಬೇಕು. ಅದನ್ನು ಹೊರತುಪಡಿಸಿ ಪದೆ ಪದೆ ಮಾಧ್ಯಮ ವೀರರಾಗಬಾರದು ಎಂದವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಇದೇ ವೇಳೆ ಸಮಾಜದ ಮುಖಂಡರಾದ ಶಿವಯ್ಯ ಸ್ವಾಮಿ, ವರದಯ್ಯ ಸ್ವಾಮಿ, ಶ್ರೀಕಾಂತ ಸ್ವಾಮಿ, ರವೀಂದ್ರ ಸ್ವಾಮಿ, ಮಹೇಶ್ವರ ಸ್ವಾಮಿ, ಮಹಾಲಿಂಗ ಸ್ವಾಮಿ ಸೇರಿದಂತೆ ಇತರರು ಬಾಬು ಪಾಸ್ವಾನ್ ಅವರ ಹೇಳಿಕೆ ಖಂಡಿಸಿದ್ದಾರೆ.