ಪಾಸ್‌ಪೋರ್ಟ್ ರದ್ದತಿ ಪ್ರಕ್ರಿಯೆ ಶುರು

ಲೈಂಗಿಕ ದೌರ್ಜನ್ಯ ಪ್ರಕರಣ

ಬೆಂಗಳೂರು,ಮೇ.೨೩-ಅತ್ಯಾಚಾರ,ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿಗೆ ಚಾಲನೆ ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಪತ್ರ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದ ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಿ ಎಂದು ಮನವಿ ಮಾಡಿರುವ ಬೆನ್ನಲ್ಲೇ ವಿದೇಶಾಂಗ ಸಚಿವಾಲಯ (ಎಂಇಎ)ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿಗೆ ಮುಂದಾಗಿದೆ.
ರಾಜ್ಯ ಸರ್ಕಾರದ ಪತ್ರ ಆಧರಿಸಿ ಕೆಲಸಕ್ಕೆ ಆರಂಬಿಸಿರುವ ಕೇಂದ್ರ ವಿದೇಶಾಂಗ ಇಲಾಖೆ, ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ಮಾಡುವ ಪ್ರಕ್ರಿಯೆ ಆರಂಭಿಸಿದೆ. ಪಾಸ್‌ಪೋರ್ಟ್ ಆಕ್ಟ್ ೧೯೬೭ರ ಸೆಕ್ಷನ್ ೧೦(೩)(ಹೆಚ್) ಅಡಿ ಪಾಸ್‌ಪೋರ್ಟ್ ರದ್ದು ಮಾಡಿ ಭಾರತಕ್ಕೆ ವಾಪಸ್ ಕರೆ ತರಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ಪತ್ರದ ಮೂಲಕ ಕೇಂದ್ರದ ಸಹಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರಿದ್ದಾರೆ. ಎಸ್‌ಐಟಿ ಹೊರಡಿಸಿದ ಆರೆಸ್ಟ್ ವಾರೆಂಟ್ ಸಮೇತ ಪತ್ರದ ಜೊತೆಗೆ ಲಗತ್ತಿಸಲಾಗಿದೆ.
ಪ್ರಕರಣದ ಪ್ರಧಾನ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಹಾಲಿ ಸಂಸದ ಹಾಗೂ ಮಾಜಿ ಪ್ರಧಾನಿಗಳ ಕುಟುಂಬದ ಸದಸ್ಯನಾಗಿದ್ದು, ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಪ್ರಯಾಣ ಮಾಡಿದ್ದಾರೆ.
ಎಫ್ ಐಆರ್ ದಾಖಲಾಗುವ ಕೆಲ ಗಂಟೆಗಳಿಗೆ ಮುನ್ನ ಸಂಸದ ಪ್ರಜ್ವಲ್ ದೇಶ ತೊರೆದಿದ್ದಾರೆ. ಅವರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಒತ್ತಾಯ ಪೂರ್ವಕವಾಗಿ ವಿಡಿಯೋ ಮಾಡಿರುವ ಆರೋಪಗಳಿವೆ. ಇಂತಹ ಆರೋಪಿ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಆರೋಪಿ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಿ. ಈ ವಿಚಾರವನ್ನು ಅತ್ಯಂತ ಗಂಭೀರ ಎಂದು ಪರಿಗಣಿಸಿ. ಸಾರ್ವಜನಿಕ ಹಿತಾಸಕ್ತಿ ಕಾರಣಕ್ಕಾಗಿ ಪಾಸ್‌ಪೋರ್ಟ್ ರದ್ದುಗೊಳಿಸಿ ಭಾರತಕ್ಕೆ ಬರುವಂತೆ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ರಾಜ್ಯ ಸರ್ಕಾರದ ಪತ್ರ ಆಧರಿಸಿ ವಿದೇಶಾಂಗ ಇಲಾಖೆಯು ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಮಾಡುವ ಪ್ರಕ್ರಿಯೆ ಆರಂಭಿಸಿದೆ.
ರಾಜತಾಂತ್ರಿಕ ಪಾಸ್‌ಪೋರ್ಟ್:
ಭಾರತೀಯ ವಿದೇಶಾಂಗ ಇಲಾಖೆಗೆ ಎಸ್‌ಐಟಿ ಅಧಿಕಾರಿಗಳು ರಾಜ್ಯ ಗೃಹ ಇಲಾಖೆ ಮುಖಾಂತರ ಪತ್ರ ರವಾನಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಪತ್ರ ಬರೆದಿದ್ದ ವೇಳೆ ನ್ಯಾಯಾಲಯದ ಆದೇಶ ಬೇಕು ಎಂದು ಕೇಂದ್ರ ಗೃಹ ಇಲಾಖೆ ಹೇಳಿತ್ತು. ಹಾಗಾಗಿ ನ್ಯಾಯಾಲಯದಿಂದ ಬಂಧನ ವಾರಂಟ್ ಪಡೆದು ಎಸ್‌ಐಟಿ ಅಧಿಕಾರಿಗಳು ಪುನಃ ಪತ್ರ ಬರೆದಿದ್ದಾರೆ. ಹೀಗಾಗಿ ಭಾರತೀಯ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆಯನ್ನು ಆರಂಭಿಸಿದೆ.
ಪಾಸ್‌ಪೋರ್ಟ್ ಭಾರತೀಯ ಪ್ರಾಧಿಕಾರ ವಿದೇಶಾಂಗ ಇಲಾಖೆ ಅಡಿಯಲ್ಲಿ ಬರುತ್ತದೆ. ಎಸ್‌ಐಟಿಯಿಂದ ಬಂದಿರುವ ಪತ್ರವನ್ನು ದೃಢೀಕರಣಕ್ಕಾಗಿ ಕೇಂದ್ರ ಗೃಹ ಇಲಾಖೆಗೆ ರವಾನೆ ಮಾಡುತ್ತದೆ. ಕೇಂದ್ರ ಗೃಹ ಇಲಾಖೆ ಪರಿಶೀಲನೆ ನಡೆಸಿ ಸಮ್ಮತಿ ಸೂಚಿಸಿದರೆ ಭಾರತೀಯ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ಅನ್ನು ರದ್ದು ಮಾಡುತ್ತದೆ.
ರದ್ದಾದರೆ ಮುಂದೇನು:
ಒಮ್ಮೆ ಪಾಸ್‌ಪೋರ್ಟ್ ರದ್ದಾದರೆ ಈ ಬಗ್ಗೆ ಎಲ್ಲ ದೇಶಗಳ ವಲಸೆ ಇಲಾಖೆಗೆ ಮಾಹಿತಿಯನ್ನು ರವಾನೆ ಮಾಡಲಾಗುತ್ತದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇಲ್ಲವೇ ಗುರುತು ಬದಲಾಯಿಸಿ ತಲೆಮರೆಸಿಕೊಂಡು ಓಡಾಡಬೇಕು. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಶೀಘ್ರದಲ್ಲೇ ಬರುವ ಸಾಧ್ಯತೆ ಇದೆ.
ಒಂದು ವೇಳೆ ಪಾಸ್‌ಪೋರ್ಟ್ ರದ್ದು ಮಾಡಿದರೆ,ಎರಡು ವಿಧಾನಗಳಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಭಾರತಕ್ಕೆ ಕರೆತರಬಹುದು. ಪ್ರಜ್ವಲ್ ಯಾವ ದೇಶದಲ್ಲಿದ್ದಾರೋ ಅಲ್ಲಿ ಅವರನ್ನು ಹಸ್ತಾಂತರ ಪ್ರಕ್ರಿಯೆ ಅಡಿ ವಾಪಸ್ ಕರೆತರಬಹುದಾಗಿದೆ. ಆದರೆ, ಆ ದೇಶದ ನಡುವೆ ಭಾರತವು ಈ ಮೊದಲು ಒಪ್ಪಂದ ಮಾಡಿಕೊಂಡಿರಬೇಕು. ಇಲ್ಲವಾದಲ್ಲಿ, ಗಡಿಪಾರು ಪ್ರಕ್ರಿಯೆ ಮೂಲಕವೂ ಪ್ರಜ್ವಲ್ ಅವರನ್ನು ಕರೆತರಬಹುದು.
ಪ್ರಕ್ರಿಯೆಗಳು ಹೇಗಿರಲಿದೆ:
ಆರೋಪಿ ಮೊದಲು ಯಾವ ದೇಶದಲ್ಲಿ ಇದ್ದಾನೆ ಎನ್ನುವುದರ ಮಾಹಿತಿಯನ್ನು ಸಂಗ್ರಹಿಸಬೇಕು ನಂತರ ಆ ದೇಶದೊಟ್ಟಿಗೆ ಎಂಎಲ್ ಎಟಿ (ಮ್ಯೂಚುವಲ್ ಲೀಗಲ್ ಅಸಿಸ್ಟೆನ್ಸ್ ಟ್ರೀಟ್ಲಿ) ಪ್ರಕ್ರಿಯೆಯನ್ನು ಆರಂಭ ಮಾಡಬೇಕು. ಅದಾದ ಬಳಿಕ ದೇಶಕ್ಕೆ ಸಂಬಂಧಪಟ್ಟ ಪ್ರಕರಣದ ಮಾಹಿತಿಯನ್ನು ಒದಗಿಸಬೇಕು. ಆಗ ಆ ದೇಶವು ಆರೋಪಿಯನ್ನು ಬಂಧನ ಮಾಡಿ ಇಲ್ಲಿಯ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡುತ್ತದೆಆಗ ಹಸ್ತಾಂತರ ಪ್ರಕ್ರಿಯೆ ಮುಖಾಂತರವಾದರೆ ಇಲ್ಲಿಯ ತನಿಖಾಧಿಕಾರಿಗಳ ತಂಡ ಅಲ್ಲಿ ಬಂಧನವಾದ ವ್ಯಕ್ತಿಯನ್ನು ತಮ್ಮ ವಶಕ್ಕೆ ಹಸ್ತಾಂತರ ಮಾಡಿಕೊಳ್ಳಬೇಕು.ಇದಕ್ಕಾಗಿ ಇಲ್ಲಿಯ ಪ್ರಕರಣದ ಕಡತವನ್ನು ಸಂಬಂಧಪಟ್ಟ ದೇಶದ ಭಾಷೆಗೆ ತರ್ಜುಮೆ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿ ಅನುಮತಿ ಪಡೆಯಬೇಕು.
ಗಡಿಪಾರು ಪ್ರಕ್ರಿಯೆ:
ಗಡಿಪಾರು ಪ್ರಕ್ರಿಯೆಗೊಳಪಡುವುದಾದರೆ, ಇದರಲ್ಲಿ ಆ ದೇಶವೇ ಇಲ್ಲಿಯ ಪ್ರಕರಣದ ಮಾಹಿತಿಯನ್ನು ಅಲ್ಲಿಯ ನ್ಯಾಯಾಲಯಕ್ಕೆ ನೀಡಿ ಗಡಿಪಾರು ಮಾಡಲು ಅನುಮತಿ ಪಡೆಯುತ್ತದೆ
ನಂತರ ಇಲ್ಲಿಯ ವಿದೇಶಾಂಗ ಇಲಾಖೆಗೆ ಆ ದೇಶ ಮಾಹಿತಿ ನೀಡಿ ನಿರ್ದಿಷ್ಟ ವಿಮಾನದಲ್ಲಿ ಆರೋಪಿಯನ್ನು ಕಳಿಸಿಕೊಡುತ್ತದೆ.
ಹಸ್ತಾಂತರ ಸುಲಭ:
ಈ ಬಾರಿ ವಿದೇಶಾಂಗ ಇಲಾಖೆ ಪ್ರಕ್ರಿಯೆ ಚುರುಕುಗೊಳಿಸಿರುವುದರಿಂದ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ಗೆ ನಿಜವಾಗಿಯೂ ಸಂಕಷ್ಟ ಎದುರಾಗಿದೆ. ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಿದರೆ ಪ್ರಜ್ವಲ್ ವಿದೇಶ ಯಾನ ಕಷ್ಟವಾಗಲಿದೆ.ಚಾಲ್ತಿಯಲ್ಲಿಲ್ಲದ ಪಾಸ್‌ಪೋರ್ಟ್ ಬಳಸಿದರೆ ಅಧಿಕಾರಿಗಳು ಅವರನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲು ಸುಲಭವಾಗಲಿದೆ. ಇದರೊಂದಿಗೆ ಪ್ರಜ್ವಲ್‌ಗೆ ಪಲಾಯನದ ದಾರಿಗಳು ಬಂದ್ ಆಗಿವೆ.